ಬೆಳಗ್ಗೆಯಿಂದ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ, ಹೋಮ, ಹವನ ಮಾಡುತ್ತಿದ್ದು, ರಾತ್ರಿಯಾದರೆ ದೇಗುಲದಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ವ್ಯಕ್ತಿ ಮತ್ತು ಸಹಚರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಅರ್ಚಕ ಜೈಲಿನಲ್ಲಿ ಪರಿಚಯವಾದ ಮತ್ತೊಬ್ಬ ಕಳ್ಳನ ಸಹವಾಸದಿಂದ ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ. ಪ್ರತಿಸಲ ಕಳ್ಳತನ ಮಾಡಿದ ನಂತರ ಇಬ್ಬರೂ ದೇವರ ಮುಂದೆ ಕ್ಷಮಿಸಿ ಎಂದು ಕೈಮುಗಿಯುತ್ತಿದ್ದರು.
ಅರ್ಚಕ ಪ್ರವೀಣ್ ಭಟ್ ಮತ್ತು ಸಂತೋಷ್ ಬಂಧಿತರು. ಪ್ರವೀಣ್ ಭಟ್ ಬೆಳಗಿನ ಜಾವ ಉಡುಪಿ, ಶಿವಮೊಗ್ಗದ ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿ ಪೂಜೆ ಮಾಡುತ್ತಿದ್ದ. ರಾತ್ರಿ ಅಲ್ಲಿದ್ದ ದೇವರ ಸಾಮಾಗ್ರಿ ಕಳವು ಮಾಡಿ ಮಾರುತ್ತಿದ್ದ. ಜೈಲಿನಲ್ಲಿ ಪರಿಚಯವಾದ ಸಂತೋಷ್ನ ಸಹವಾಸದಿಂದ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಿಗೂ ಕನ್ನ ಹಾಕಿ ಸದ್ಯ ಪೋಲಿಸರ ಅತಿಥಿಯಾಗಿದ್ದಾರೆ.
ಪ್ರವೀಣ್ ಭಟ್ ಅರ್ಚಕನಾಗಿದ್ದರಿಂದ ದೇವಾಲಯದ ದೇವರ ಬೆಳ್ಳಿ ಸಾಮಗ್ರಿಗಳು, ಹಿತ್ತಾಳೆ ವಸ್ತುಗಳು, ಚಿನ್ನಾಭರಣವನ್ನು ಕದ್ದು ಮಾರಾಟ ಮಾಡುವಾಗ ವಸ್ತುಗಳನ್ನು ಕೊಂಡುಕೊಳ್ಳುವರು ಯಾವುದೇ ಅನುಮಾನ ಪಡುತ್ತಿರಲಿಲ್ಲ. ಮನೆಯಲ್ಲಿ ಕಷ್ಟ ಇದೆ. ಮನೆಯ ತುಂಬಾ ಇಂತಹ ವಸ್ತುಗಳೇ ಇವೆ ಎಂದು ಹೇಳುತ್ತಿದ್ದ. ಒಮ್ಮೆ ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಹೀಗೆ ಜೈಲು ಸೇರಿದ ಪ್ರವೀಣ್ ಭಟ್ಗೆ ಸಂತೋಷ್ ಪರಿಚಯವಾಗಿದೆ. ಇಬ್ಬರು ಹೊರಗಡೆ ಬಂದು ಒಟ್ಟಾಗಿ ಕಳ್ಳತನ ಮಾಡುತ್ತಿದ್ದರು.
ಬನಶಂಕರಿ ದೇವಾಲಯದಲ್ಲಿ ಅರ್ಚಕನಾಗಿದ್ದಾಗ ಕೂಡ ಕಳ್ಳತನ ಮಾಡಿದ್ದ. ದೇವಾಲಯದ ಆಡಳಿತ ಮಂಡಳಿ ಪರಿಶೀಲನೆ ಮಾಡಿ ಬಳಿಕ ಪೋಲಿಸರಿಗೆ ದೂರು ನೀಡಿತ್ತು. ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಪೊಲೀಸ್‌ಗೆ ಸಿಕ್ಕಿಬಿದ್ದಿದ್ದರು. ತನಿಖೆ ಮಾಡಿದಾಗ ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದು ಬಯಲಾಗಿತ್ತು.
ಕದ್ದ ಸಾಮಾಗ್ರಿಗಳನ್ನು ಅಂಗಡಿಗೆ ಮಾರಾಟ ಮಾಡಿದರೆ ಮತ್ತೊಮ್ಮೆ ಆ ಕಡೆ ಅಂಗಡಿಗೆ ಹೋಗುತ್ತಿರಲಿಲ್ಲ. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರ ವಿರುದ್ಧ ಬನಶಂಕರಿ, ಜಯನಗರ, ಕುಮಾರಸ್ವಾಮಿ, ಜೆಪಿ ನಗರ ಸೇರಿ 11 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.