ಕರ್ನಾಟಕದಲ್ಲಿ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ನಡೆಯುತ್ತಿರುವ ಸಂದರ್ಭದಲ್ಲೇ, ಶಾಲಾ ರಜೆ ವಿಸ್ತರಣೆ ಕುರಿತಾಗಿ ಉದ್ಭವವಾಗಿರುವ ಪ್ರಶ್ನೆಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗದವರಿಗೂ ಸಮಾನತೆ ಸೃಷ್ಟಿಸಲು ಸಾಮಾಜಿಕ, ಆರ್ಥಿಕ ಸಮೀಕ್ಷೆಅವಶ್ಯವಾಗಿದೆ.
ಶಾಲೆಗಳಿಗೆ ಅಡ್ಡಿ ಆಗಬಾರದು ಎನ್ನುವ ಕಾರಣದಿಂದ ಜಾತಿವಾರು ಸಮೀಕ್ಷೆಗೆ ದಸರಾ ರಜೆಯನ್ನು ಬಳಸಿಕೊಂಡಿದ್ದೇವೆ. ರಜೆ ಮುಗಿದ ತಕ್ಷಣವೇ ಶಾಲೆಗಳು ಪುನರಾರಂಭ ಆಗಲಿವೆ ಎಂದು ತಿಳಿಸಿದರು.
“ದಸರಾ ಹಬ್ಬ ಸಂಭ್ರಮಿಸಲು ಅವಕಾಶ ಕೊಡದೆ ಶಿಕ್ಷಕರ ಬಳಿ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಹಾಗೂ ಕೇಂದ್ರ ಸರ್ಕಾರ ನಡೆಸುವ ಗಣತಿಯಲ್ಲೂ ಶಿಕ್ಷಕರನ್ನೇ ಬಳಸುತ್ತಾರೆ. ರಾಜ್ಯದಲ್ಲಿನ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಮೀಕ್ಷೆ ಅನಿವಾರ್ಯವಾಗಿದೆ. ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಜೊತೆ ಮಾತನಾಡಿ ಈ ಸಮೀಕ್ಷೆಯ ಆದ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ,” ಎಂದು ಪ್ರತಿಕ್ರಿಯಿಸಿದರು.
“ದಸರಾ ರಜೆ ವಿಸ್ತರಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರಜೆ ಮುಗಿದ ತಕ್ಷಣವೇ ಶಾಲೆಗಳು ಆರಂಭ ಆಗುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕುರಿತು ಚರ್ಚೆ ನಡೆಸಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ,” ಎಂದು ಹೇಳಿದರು.