ಬೆಂಗಳೂರು: ಚೂಡಿದಾರ್ ಮತ್ತು ಡ್ರೆಸ್ ಪೀಸ್ ಗಳ ಮಧ್ಯೆ ಮಾದಕ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷದ ಹಿಂದೆ ಬ್ಯೂಸೆನೆಸ್ ವೀಸಾ ಮೂಲಕ ಭಾರತಕ್ಕೆ ಬಂದಿದ್ದ ನೈಜಿರಿಯಾ ಮೂಲದ ಮಹಿಳೆಯನ್ನು ಬಂಧಿಸಿದ ಪೊಲೀಸರು 10 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಬಂಧಿತ ಮಹಿಳೆ ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಆರಂಭದಲ್ಲಿ ದೆಹಲಿಯಲ್ಲಿ ವಾಸವಾಗಿದ್ದಳು. ನಂತರ ತೆಲಂಗಾಣ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುವುದಾಗಿ ಎಜುಕೇಷನ್ ವೀಸಾ ಪಡೆದರೂ ಕಾಲೇಜಿಗೆ ದಾಖಲಾಗದೆ ಡ್ರಗ್ಸ್ ಪೆಡ್ಲಿಂಗ್‍ಗೆ ಇಳಿದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಬಸ್ ಮೂಲಕ ಮಾದಕವಸ್ತು ತಂದು ರಾಜಾನುಕುಂಟೆ ಬಳಿ ಮಾದಕವಸ್ತು ವ್ಯಾಪಾರ ಮಾಡುವಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ 5 ಕೆಜಿ 325ಗ್ರಾಂ ಎಂಡಿಎಂಎ ಹಾಗೂ ಆ್ಯಪಲ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಮಹಿಳೆ, ಹೊಸ ಚೂಡಿದಾರ್ ಡ್ರೆಸ್ ಪೀಸ್‍ಗಳ ಮಧ್ಯೆ ಮಾದಕವಸ್ತು ಅಡಗಿಸಿಕೊಂಡು ದೆಹಲಿಯಿಂದ ಬೆಂಗಳೂರಿಗೆ ತರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದೇಶೀ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.