ಬೆಂಗಳೂರು ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ, ಅದರಲ್ಲೂ ಮುಖ್ಯವಾಗಿ ಇಬ್ಲೂರು ಜಂಕ್ಷನ್ ಬಳಿ ಸಂಚಾರ ದಟ್ಟಣೆ ತಗ್ಗಿಸಲು ನಿಮ್ಮ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಪೀಕ್ ಅವರ್ ಸಂಚಾರ ದಟ್ಟಣೆಯೂ ಒಂದು. ಇದು ಚಲನಶೀಲತೆ, ಉತ್ಪಾದಕತೆ ಮತ್ತು ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರ್ನಾಟಕದ ಐಟಿ ಪರಿಸರ ವ್ಯವಸ್ಥೆಯ ಪ್ರಗತಿಗೆ ಮತ್ತು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಪ್ರೋದ ನಿರಂತರ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಪೀಕ್ ಸಮಯದಲ್ಲಿ ತೀವ್ರ ಸಂಚಾರ ದಟ್ಟಣೆಯಾಗುತ್ತಿದೆ. ಪರಸ್ಪರ ಒಪ್ಪಿದ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆ ಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯನ್ನು ನಾನು ನಿರೀಕ್ಷಿಸುತ್ತೇನೆ. ಸಂಚಾರ ಮತ್ತು ನಗರ ಚಲನಶೀಲತೆ ತಜ್ಞರ ಪ್ರಾಥಮಿಕ ಮೌಲ್ಯಮಾಪನಗಳ ನಂತರ ಹೊರ ವರ್ತುಲ ರಸ್ತೆ ಕಾರಿಡಾರ್‌ನ ಪಕ್ಕದ ಪ್ರದೇಶಗಳಲ್ಲಿ ಪೀಕ್ ಕಚೇರಿ ಸಮಯದಲ್ಲಿ ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಶೇ.30 ರಷ್ಟು ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಿಎಂ ವಿವರಿಸಿದ್ದಾರೆ.
ಈ ವಿಷಯದಲ್ಲಿ ಪ್ರೇಮ್‌ಜಿ ಅವರ ಬೆಂಬಲವು ಬಹಳ ಸಹಾಯ ಮಾಡುತ್ತದೆ. ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಪರಸ್ಪರ ಸ್ವೀಕಾರಾರ್ಹ ಯೋಜನೆಯನ್ನು ರೂಪಿಸಲು ಸಾಧ್ಯವಾದರೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.