Tuesday, September 23, 2025
Menu

ಎಲ್ಲ ರಾಜ್ಯಗಳ ಗಮನಕ್ಕೆ ತಂದೇ ಜಿಎಸ್‌ಟಿ ಸುಧಾರಣೆ ಜಾರಿ: ಸಂಸದ ಸುಧಾಕರ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರಾಜ್ಯಗಳ ಗಮನಕ್ಕೆ ತಂದೇ ಜಿಎಸ್‌ಟಿ ಸುಧಾರಣೆ ತಂದಿದೆ. ರಾಜ್ಯದಲ್ಲಿ ತೆರಿಗೆ ಏರಿಕೆಯಾಗಿದ್ದರೆ, ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯದಶಮಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿಯನ್ನು ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ. ಶೇ.18 ರ ತೆರಿಗೆಯನ್ನು ಶೇ.5 ಕ್ಕೆ ತಂದಿದ್ದಾರೆ. ಕೆಲವು ಸರಕು, ಸೇವೆಗಳಲ್ಲಿ ತೆರಿಗೆ ವಿನಾಯಿತಿ ನೀಡಿದ್ದಾರೆ. ನಾನು ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ. ಮಧ್ಯಮವರ್ಗ ಹಾಗೂ ಬಡಜನರ ಪರವಾಗಿ ನಾನು ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ರೈತರು ಬಳಕೆ ಮಾಡುವ ಟ್ರ್ಯಾಕ್ಟರ್‌, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳ ತೆರಿಗೆಯನ್ನು ಶೇ.5 ರ ವ್ಯಾಪ್ತಿಗೆ ತರಲಾಗಿದೆ. ಯುಪಿಎ ಅವಧಿಯಲ್ಲಿ ಎಲ್ಲ ಸರಕು, ಸೇವೆಗಳ ಮೇಲೆ ಶೇ.30 ರಷ್ಟು ತೆರಿಗೆ ಇತ್ತು. ಮೋದಿ ಸರ್ಕಾರ ಮೊದಲಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ತಂದು ಈಗ ಎರಡು ಹಂತಗಳನ್ನು ಉಳಿಸಿಕೊಂಡಿದೆ. ಈ ಸುಧಾರಣೆಯಿಂದ ಎರಡೂವರೆ ಲಕ್ಷ ಕೋಟಿ ರೂ. ಜನರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಒಂದು ಕಾರು ಖರೀದಿಸುವವರಿಗೆ ಎರಡು ಲಕ್ಷ ರೂ. ನಷ್ಟು ಉಳಿತಾಯವಾಗಲಿದೆ. ಆರೋಗ್ಯ ವಿಮೆ ಹಾಗೂ ಜೀವ ವಿಮೆ ಮಾಡಿಸಲು ಯಾವುದೇ ತೆರಿಗೆ ಇಲ್ಲ. ಬಹಳಷ್ಟು ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಫಿಟ್‌ನೆಸ್‌ ಉಪಕರಣಗಳಿಗೆ ತೆರಿಗೆ ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ 144 ವಂದೇ ಭಾರತ್‌ ರೈಲುಗಳ ಕಾರ್ಯಾಚರಣೆ ನಡೆಸುತ್ತಿದೆ. ಯುಪಿಎ ಕಾಲದಲ್ಲಿದ್ದ ವಿಮಾನ ನಿಲ್ದಾಣಗಳು ಈಗ ದುಪ್ಪಟ್ಟಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದ ಶೇ.60 ರಷ್ಟು ಹೆಚ್ಚಿದೆ. ಡಿಬಿಟಿ ವ್ಯವಸ್ಥೆಯಡಿ ಶೇ.90 ರಷ್ಟು ಹಣ ನೇರವಾಗಿ ಜನರ ಖಾತೆಗೆ ಹೋಗುತ್ತಿದೆ. ಆಪರೇಶನ್‌ ಸಿಂದೂರದಲ್ಲಿ ಭಾರತೀಯ ಯೋಧರು ಉಗ್ರರ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಯುಪಿಎಗೆ ಹೋಲಿಸಿದರೆ ಎನ್‌ಡಿಎ ಸರ್ಕಾರ ರಕ್ಷಣಾ ವಲಯಕ್ಕೆ 34 ಪಟ್ಟು ಅಧಿಕ ಅನುದಾನ ನೀಡಿದೆ. ಹೀಗೆ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸದ್ಬಳಕೆ ಮಾಡುತ್ತಿದೆ ಎಂದು ಹೇಳಿದರು.

ಯುಪಿಎ ಅವಧಿಯಲ್ಲಿ ಹಾಲಿನ ಉತ್ಪನ್ನಗಳಿಗೆ 18% ತೆರಿಗೆ ಇತ್ತು. ಐಷಾರಾಮಿ ಕಾರ್‌ಗಳಿಗೂ ಅಷ್ಟೇ ಇತ್ತು. ಎನ್‌ಡಿಎ ಸರ್ಕಾರ ಹಾಲಿಗೆ ತೆರಿಗೆ ತೆಗೆದುಹಾಕಿದೆ. ಯುಪಿಎ ಅವಧಿಯಲ್ಲಿ ಸಿಮೆಂಟ್‌, ಪೇಯಿಂಟ್‌, ಟಿವಿ, ಫ್ರಿಡ್ಜ್‌ಗೆ 30% ಇದ್ದು, ಈಗ ಅದು 18% ಗೆ ಇಳಿದಿದೆ. ಮಹಿಳೆಯರ ಸ್ಯಾನಿಟರಿ ಪ್ಯಾಡ್‌ಗೆ 13% ತೆರಿಗೆ ಇತ್ತು. ʼಸ್ವಸ್ಥ ನಾರಿ, ಸಶಕ್ತ ಪರಿವಾರʼ ಎಂಬ ಘೋಷಣೆ ನೀಡಿರುವ ಪ್ರಧಾನಿ ಮೋದಿ ಸ್ಯಾನಿಟರಿ ಪ್ಯಾಡ್‌ ಮೇಲಿನ ತೆರಿಗೆ ರದ್ದು ಮಾಡಿದ್ದಾರೆ. ಮಿನರಲ್‌ ನೀರಿನ ಬಾಟಲ್‌ಗೆ ಇದ್ದ ಶೇ.28 ರ ತೆರಿಗೆ ಶೇ.5 ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌

ಕಾಂಗ್ರೆಸ್‌ ಸರ್ಕಾರಕ್ಕೆ ಜಿಎಸ್‌ಟಿ ಎಂದರೆ ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌. 38 ರೂ. ಇದ್ದ ಹಾಲಿಗೆ 47 ರೂ. ಆಗಿದೆ. ಬಸ್‌ ದರ 100 ಕಿ.ಮೀ. 100 ಇದ್ದಿದ್ದು, 115 ರೂ. ಆಗಿದೆ. ಪೆಟ್ರೋಲ್‌ಗೆ 99 ರೂ. ಇದ್ದಿದ್ದು, 103 ರೂ. ಆಗಿದೆ. ಡೀಸೆಲ್‌ಗೆ 8% ದರ ಹೆಚ್ಚಿದೆ. ನೀರಿನ ಶುಲ್ಕ 55% ಹೆಚ್ಚಾಗಿದೆ. ವಿದ್ಯುತ್‌ ದರ 120 ರೂ. ನಿಂದ 145 ರೂ.ಗೆ ಏರಿದೆ. ಸ್ಟಾಂಪ್‌ ಡ್ಯೂಟಿ 150% ಹೆಚ್ಚಿದೆ. ಅಫಿಡವಿಟ್‌ಗೆ 20 ರೂ. ನಿಂದ 100 ರೂ.ಗೆ ಏರಿಸಲಾಗಿದೆ. ಬಿಬಿಎಂಪಿಯಲ್ಲಿ ಕಸಕ್ಕೆ ಹೊಸದಾಗಿ 400 ರೂ. ಶುಲ್ಕ ವಿಧಿಸಲಾಗಿದೆ. ಹೊಸ ವಾಹನಗಳ ನೋಂದಣಿಗೆ 500 ರೂ. ನಿಂದ 1,000 ರೂ. ಹೆಚ್ಚಿದೆ. ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕವನ್ನು 100 ರಿಂದ 500 ರೂ. ಗೆ ಏರಿಸಲಾಗಿದೆ ಎಂದು ದೂರಿದರು.

ದಲಿತರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಲಾಗಿದೆ. ಪ್ರಸಕ್ತ ಸಾಲಿನ 2025-26 ನೇ ಬಜೆಟ್ ನಲ್ಲಿ SCSP/TSP ಅಡಿ 42,017.51 ಕೋಟಿ ರೂ. ಅನುದಾನದಲ್ಲಿ 11,896.84 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಕಾಂಗ್ರೆಸ್‌ ನಾಯಕರು, ದಲಿತರ ನಿಗಮಗಳಿಗೆ ಅನುದಾನ ಕಡಿತ ಮಾಡಿದ್ದಾರೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ರೂ. ಅನುದಾನ ಕಡಿತ, ವಿಶ್ವಕರ್ಮ ನಿಗಮಕ್ಕೆ 12 ಕೋಟಿ ರೂ. ಅನುದಾನ ಕಡಿತ, ಉಪ್ಪಾರ ನಿಗಮಕ್ಕೆ 7 ಕೋಟಿ ರೂ. ಅನುದಾನ ಕಡಿತ ಮಾಡಿದ್ದಾರೆ ಎಂದು ಟೀಕಿಸಿದರು.

ಶಾಲೆಗಳಿಗೆ ಅನುದಾನ ಕೊಡದೆ ಕೊಠಡಿಗಳ ದುರಸ್ತಿಗೆ ಹಣವಿಲ್ಲ. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಭ್ರಷ್ಟಾಚಾರದಲ್ಲಿ ನಂ.1 ರಾಜ್ಯ ಎಂದಿರುವುದರ ಜೊತೆಗೆ ಗ್ಯಾರಂಟಿಯಿಂದಾಗಿ ಹಣವಿಲ್ಲ ಎಂದಿದ್ದಾರೆ. ಮಲ್ಲಿಕಾರ್ಜನ ಖರ್ಗೆಯವರೇ ಮಂಕರಿ ಮಣ್ಣು ಹಾಕಲು ಅನುದಾನವಿಲ್ಲ ಎಂದಿದ್ದಾರೆ ಎಂದರು.

ರಾಜ್ಯದ ಸಚಿವರಿಂದ ಸಹಿ

ತೆರಿಗೆ ಇಳಿಕೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಈಗ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿರುವ 33 ಸದಸ್ಯರು ಕೂಡ ಇದಕ್ಕೆ ಒಪ್ಪಬೇಕಾಗುತ್ತದೆ. ರಾಜ್ಯ ಸರ್ಕಾರದ ಪರವಾಗಿ ಸಚಿವ ಕೃಷ್ಣ ಭೈರೇಗೌಡರು ಇದಕ್ಕೆ ಸಹಿ ಹಾಕಿದ್ದಾರೆ. ಸರಿ ಇಲ್ಲ ಎಂದಮೇಲೆ ಸಹಿ ಹಾಕಿದ್ದು ಏಕೆ? ಈ ಸುಧಾರಣೆ ಬಗ್ಗೆ ಒಂದು ವರ್ಷದಿಂದಲೇ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರಕ್ಕೆ ಆದಾಯ ಕಡಿಮೆಯಾದರೂ ಜನರ ಹಿತದೃಷ್ಟಿಯಿಂದ ಈ ಕ್ರಮ ತರಲಾಗಿದೆ. ಈಗ ಹಣದುಬ್ಬರ 2.7% ಹಾಗೂ ಆರ್ಥಿಕ ಬೆಳವಣಿಗೆ ದರ 7.9% ಇದೆ. ಹೀಗೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಆರ್ಥಿಕ ಚೈತನ್ಯ ನೀಡಿದ್ದಾರೆ ಎಂದರು.

ಉದ್ಯಮಗಳು ಹಾಗೂ ವ್ಯಾಪಾರಿಗಳು ಹೊಸ ಜಿಎಸ್‌ಟಿ ಜಾರಿ ಮಾಡುತ್ತಿದ್ದಾರೆ. ಯಾರಾದರೂ ಜಾರಿ ಮಾಡದೇ ಇದ್ದರೆ ಅದನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಈಗಾಗಲೇ ಜನರಿಗೆ ಜಿಎಸ್‌ಟಿಯ ಲಾಭ ದೊರೆತಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *