ಪೋಷಕರ ನಿರ್ಲಕ್ಷ್ಯಕ್ಕೆ ಜನಿಸಿದ ಕೂಡಲೇ ಮೂರು ನವಜಾತ ಶಿಶುಗಳು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ.
ಮೃತ ಶಿಶುಗಳು ಆನಂದ–ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಎಂದು ತಿಳಿದು ಬಂದಿದೆ. ಬಡತನ, ಪೌಷ್ಟಿಕಾಂಶದ ಕೊರತೆ, ಅಜ್ಞಾನ ಮತ್ತು ವೈದ್ಯಕೀಯ ಸೇವೆಗಳ ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣವಾಗಿದೆ.
ಸುಮಾರು 5 ವರ್ಷಗಳ ಹಿಂದೆ ಆನಂದ–ಮಂಜುಳಾ ದಂಪತಿ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಮನೆಯವರ ಒಪ್ಪಿಗೆ ಇಲ್ಲದ ಕಾರಣ, ಈ ಜೋಡಿ ಮನೆಯಿಂದ ದೂರವಿದ್ದು, ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಈ ದಂಪತಿಗಳಿಗೆ ಈಗಾಗಲೇ ಒಂದು ಮಗು ಇದೆ. ಇತ್ತೀಚೆಗೆ ಎರಡನೇ ಬಾರಿ ಗರ್ಭಧರಿಸಿದ ಸಂದರ್ಭದಲ್ಲಿ, ಸೂಕ್ತ ಸಮಯದಲ್ಲಿ ವೈದ್ಯಕೀಯ ತಪಾಸಣೆ ನಡೆಸದೆ ಇರುವ ಕಾರಣ ಗರ್ಭದಲ್ಲೇ ತ್ರಿವಳಿ ಮಕ್ಕಳು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಮಂಜುಳಾಗೆ ಆಕೆಯ ಹೊಟ್ಟೆಯಲ್ಲಿ ತ್ರಿವಳಿ ಮಕ್ಕಳಿರುವುದೂ ಗೊತ್ತಿರಲಿಲ್ಲ. ಬಡತನದ ಹಾಗು ಕೌಟುಂಬಿಕೆ ಕಲಹದ ಕಾರಣ ಗರ್ಭಿಣಿಯಾಗಿದ್ದ ಅವಧಿಯಲ್ಲಿ ಅಗತ್ಯ ತಪಾಸಣೆಗಳಿಗೆ ಆಕೆ ಹೋಗಿರಲಿಲ್ಲ. ಸ್ಥಳೀಯ ಆಶಾ ಕಾರ್ಯಕರ್ತೆಯರು ಹಲವು ಬಾರಿ ತಪಾಸಣೆಗೆ ಕರೆಸಿದ್ದರೂ, ತಪಾಸಣೆ ಮಾಡಿಕೊಂಡಿದ್ದಾಗಿ ತಿಳಿಸಿ ವೈದ್ಯಕೀಯ ಆರೈಕೆಯನ್ನು ನಿರ್ಲಕ್ಷಿಸಿದ್ದರು.
ಕಳೆದ ಶನಿವಾರ ಮಂಜುಳಾಗೆ ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಒಂದು ಗಂಡು ಮಗು ಜನಿಸಿದೆ, ಆದರೆ ಅದು ಮೊದಲೇ ಸಾವನ್ನಪ್ಪಿತ್ತು. ಕೂಡಲೇ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಂತರ ಆನೇಕಲ್ ತಾಲ್ಲೂಕು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಹೊಟ್ಟೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪಿರುವುದನ್ನು ದೃಢಪಡಿಸಿದರು.