ರಾಜ್ಯದ ಚಿತ್ರಮಂದಿರಗಳಲ್ಲಿ ಟಿಕೆಟ್ನ ಬೆಲೆ 200 ರೂಪಾಯಿಗೆ ನಿಗದಿಪಡಿಸಿ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಚಿತ್ರರಂಗ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ಹೋರಾಟ ನಡೆಸುತತ ಬಂದಿದೆ. ಈ ವಿಚಾರವಾಗಿ ಚರ್ಚೆ, ವಾದ- ಪ್ರತಿವಾದಗಳು ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿದೆ. ಸರ್ಕಾರದ ದರ ನಿಗದಿ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು. ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ.
200 ರೂಪಾಯಿ ಟಿಕೆಟ್ ದರ ನಿಗದಿಯಿಂದ ಬಿಗ್ ಬಜೆಟ್ ಸಿನಿಮಾಗಳಿಗೆ ಇದರಿಂದ ತೊಂದರೆ ಆಗಲಿದೆ ಎಂಬ ಚರ್ಚೆ ಶುರುವಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ನ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿದೆ.
ರೇರಾ ಸುತ್ತೋಲೆ ರದ್ದುಗೊಳಿಸಿದ ಹೈಕೋರ್ಟ್
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ 2020ರ ಸೆಪ್ಟೆಂಬರ್ 3 ರಂದು ಹೊರಡಿಸಿದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಈ ಸುತ್ತೋಲೆಯು ಡೆವಲಪರ್‌ಗಳು ತ್ರೈಮಾಸಿಕ ಯೋಜನಾ ನವೀಕರಣಗಳು ಅಥವಾ ವಾರ್ಷಿಕ ಆಡಿಟ್ ವರದಿಗಳನ್ನು ತಡವಾಗಿ ಸಲ್ಲಿಸಿದರೆ ‘ವಿಳಂಬ ಶುಲ್ಕ’ ಪಾವತಿಸುವುದನ್ನು ಕಡ್ಡಾಯಗೊಳಿಸಿತ್ತು.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು, ಆಕ್ಷೇಪಾರ್ಹ ಸುತ್ತೋಲೆಯನ್ನು ಪ್ರಶ್ನಿಸಿ ಬಿಲ್ಡರ್‌ಗಳು, ಡೆವಲಪರ್‌ಗಳು ಮತ್ತು ಪ್ರಮೋಟರ್ಸ್‌ಗಳು ಸಲ್ಲಿಸಿದ 75 ಅರ್ಜಿಗಳನ್ನು ಮಾನ್ಯ ಮಾಡಿ ಆದೇಶ ಹೊರಡಿಸಿದರು. ರೇರಾ ನಾಗರಿಕನ ಮೇಲೆ ಆರ್ಥಿಕ ಹೊರೆಯನ್ನು ಹೇರಲು ಬಯಸಿದರೆ, ಅದನ್ನು ಕಾನೂನು ಮೂಲಕವೇ ಅಧಿಕೃತಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.