ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ತನ್ನ ಪತ್ನಿಯೊಂದಿಗೆ ತನ್ನ ತಂದೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಆರೋಪಿಸಿ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಸಂದನಪಾಳ್ಯ ನಿವಾಸಿ ಪಾಕಿಯನಾಥನ್ ಅಲಿಯಾಸ್ ಆರುಳನಂದ ಕೊಲೆಯಾದವರು. ಮಗ ಜಾನ್ಸನ್ ಜೀವ ಕೊಲೆ ಆರೋಪಿ. ಜಾನ್ಸನ್ ಪತ್ನಿಯ ಜೊತೆ ಪಾಕಿಯನಾಥನ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಆಗಾಗ ಗಲಾಟೆ ನಡೆಯುತ್ತಿತ್ತು.
ಜಾನ್ಸನ್ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತಂದೆ ಜತೆ ಗಲಾಟೆ ಮಾಡಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದ ತಾಯಿ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಎರಡು ತಿಂಗಳ ಶಿಶುವನ್ನು ತಾಯಿ ಕಾಲುವೆಗೆ ಎಸೆದಿರುವ ಘಟನೆ ಇತ್ತೀಚೆಗೆ ನಡೆದಿದೆ.
ಆರೋಪಿ ತಾಯಿ ಪ್ರಿಯಾಂಕಾ ದೇವಿ ಎಂಬಾಕೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಿಯಾಂಕಾ ದೇವಿ ಮತ್ತು ಪತಿ ಸರೋಜ್ ಕುಮಾರ್ ಬಿಹಾರದವರಾಗಿದ್ದು, ತೋರಣಗಲ್ಲಿನಲ್ಲಿ ವಾಸವಾಗಿದ್ದರು. ಸರೋಜ್ ಕುಮಾರ್ ಜಿಂದಾಲ್ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಂಪತಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿವೆ.
ಪ್ರಿಯಾಂಕಾ ದೇವಿ ಮಗು ಕಾಣೆಯಾಗಿದೆ ಎಂದು ಗೋಳಾಡಿದ್ದಳು. ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ. ತಾಯಿಯೇ ಶಿಶುವನ್ನು ಎತ್ತಿಕೊಂಡು ಹೋಗಿರುವುದು ಪತ್ತೆಯಾಗಿತ್ತು.