ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಇದನ್ನು ಸಾಮಾಜಿಕ ಮತ್ತು ಶೈಕ್ಷಣಿಗೆ ಸಮೀಕ್ಷೆ ಎಂದು ಕರೆದಿದ್ದರೂ ಮೂಲತಃ ಇದು ಜಾತಿ ಸಮೀಕ್ಷೆ ಎಂಬುದರಲ್ಲಿ ಸಂದೇಹವಿಲ್ಲ. ಇದುವರೆಗೆ ಲಿಂಗಾಯತರು ಮತ್ತು ಒಕ್ಕಲಿಗರು ಅಧಿಕಾರದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವುದಂತೂ ನಿಜ.
೧೯೩೧ ರ ಗಣತಿಯಲ್ಲಿ ಈ ಸಮುದಾಯಗಳು ಹೆಚ್ಚಿನ ಜನಸಂಖ್ಯೆ ಹೊಂದಿದ್ದವು. ಅಲ್ಲದೆ ಆರ್ಥಿಕವಾಗಿ ಬಲಾಢ್ಯರು. ಅಧಿಕಾರ ಮತ್ತು ಆಸ್ತಿ ಎರಡೂ ಅವರ ಬಳಿಯೇ ಇತ್ತು. ಈಗ ಕಾಲ ಬದಲಾಗಿದೆ. ಹಿಂದುಳಿದ ವರ್ಗ, ಮುಸ್ಲಿಮರು ರಾಜಕೀಯವಾಗಿ ಮುಂದೆ ಬರಲು ಹಾತೊರೆಯುತ್ತಿದ್ದಾರೆ. ಅವರು ಜಾತಿ ಸಮೀಕ್ಷೆ ಮೂಲಕ ತಮ್ಮ ಹಕ್ಕನ್ನು ಚಲಾಯಿಸಲು ಮುಂದೆ ಬಂದಿದ್ದಾರೆ. ಅಂದರೆ ಪ್ರಬಲ ಕೋಮಿನವರು ಮುಂಬರುವ ದಿನಗಳಲ್ಲಿ ಹಿಂದುಳಿದವರ್ಗದೊಂದಿಗೆ ಅಧಿಕಾರ ಹಂಚಿಕೊಳ್ಳಬೇಕಾಗಿ ಬರಲಿದೆ. ತೆಲಂಗಾಣದಲ್ಲಿ ಈ ಬದಲಾವಣೆ ಈಗಲೇ ಕಂಡು ಬರುತ್ತಿದೆ.
ಕರ್ನಾಟಕದಲ್ಲೂ ಈ ಗಾಳಿ ಬೀಸುವ ಲಕ್ಷಣ ಕಂಡು ಬರುತ್ತಿದೆ. ಅದರಿಂದಲೇ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು. ಅಲ್ಲದೆ ಈ ಎರಡೂ ಪಂಗಡಗಳಲ್ಲಿ ಉಪಜಾತಿಗಳುಹೆಚ್ಚಿನಸಂಖ್ಯೆಯಲ್ಲಿವೆ. ದಲಿತರಲ್ಲಿ ಈಗ ಎಡ ಮತ್ತು ಬಲ ಪ್ರಬಲಗೊಂಡಿವೆ. ಅಂದರೆ ಈ ಶಕ್ತಿಗಳು ರಾಜಕೀಯ ಅಧಿಕಾರದಲ್ಲಿ ಪಾಲುಬಯಸುವುದು ಸಹಜ. ಈಗ ಯಾವುದೇ ಸರ್ಕಾರ ಇರಲಿ ಲಿಂಗಾಯತರು ಮತ್ತು ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಾಗಿರುತ್ತಿದ್ದರು. ಈಗ ಈ ಚಿತ್ರಣ ಬದಲಾಗಲಿದೆ. ಸಿದ್ದರಾಮಯ್ಯ ಜಾತಿಸಮೀಕ್ಷೆ ಮೂಲಕ ಇದನ್ನೇ ಬಯಸಿದ್ದಾರೆ. ಆದರೆ ಇದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಜಾತಿ ಸಂಘರ್ಷ ನಡೆದು ಕದಡಿದ ನೀರಿನಲ್ಲಿ ಬಗ್ಗಡ ನಿಧಾನವಾಗಿ ತಳ ಕಂಡ ಮೇಲೆ ಎಲ್ಲವೂ ತಿಳಿಯಾಗಬಹುದು. ಆದರೆ ಅಲ್ಲಿಯವರಿಗೆ ಸಿದ್ದರಾಮಯ್ಯ ಸರ್ಕಾರ ಉಳಿದಿರುತ್ತದೆಯೇ ಎಂಬುದು ಯಕ್ಷ ಪ್ರಶ್ನೆ.
ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ವಿತರಣೆ ರೀತಿ-ನೀತಿಯೂ ಬದಲಾಗಲಿದೆ. ಜಾತಿ ಜನಸಂಖ್ಯೆ ಆಧಾರದ ಮೇಲೆ ಮಿಸಲಾತಿ, ರಾಜಕೀಯಅಧಿಕಾರ ವಿತರಣೆಯಾಗಬೇಕು ಎಂದು ಬಯಸಿದ ಮೇಲೆ ಜಾತ್ಯತೀತ ಎಂಬ ಮಾತು ಅರ್ಥ ಕಳೆದುಕೊಳ್ಳುವುದು ಸಹಜ. ಜಾತಿಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವುದರಿಂದ ಇಂದಿರಾಸಾಹ್ನಿ ಪ್ರಕರಣದಲ್ಲಿಸುಪ್ರೀಂ ಕೋರ್ಟ್ ವಿಧಿಸಿರುವ ಶೇ.೫೦ ರ ಮೀಸಲಾತಿ ಲಕ್ಷ್ಣಣರೇಖೆಯನ್ನು ಬದಲಿಸುವುದು ಅಗತ್ಯವವಾಗಲಿದೆ. ಜಾತಿ ಸಮೀಕ್ಷೆಯ ವರದಿ ನ್ಯಾಯಾಲಯದ ಮೆಟ್ಟಿಲು ಹತ್ತುವುದಂತೂ ನಿಶ್ಚಿತ. ಹಿಂದೆ ದೇವರಾಜ ಅರಸು ಭೂಸುಧಾರಣೆ ಕಾಯ್ದೆ ಜಾರಿಗೆ ತಂದು ಜಮ್ದೀದಾರಿ ಪದ್ಧತಿಯನ್ನು ಹೋಗಲಾಡಿಸಿದರು. ಹಿಂದುಳಿದ ವರ್ಗಗಳಿಗೆ ಹೆಚ್ಚಿನ ರಾಜಕೀಯ ಅಧಿಕಾರ ಸಿಗುವಂತೆ ಮಾಡಿದರು. ಹಾವನೂರು ವರದಿ ಮೂಲಕ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಿಕೊಟ್ಟಿದ್ದರು. ಆಗ ಆಯೋಗದ ಪ್ರತಿಯನ್ನು ಸುಟ್ಟಿದ್ದು ಭೀಮಣ್ಣ ಖಂಡ್ರೆ ಎಂಬುದನ್ನು ಮರೆಯುವ ಹಾಗಿಲ್ಲ. ಈಗಲೂ ಅದೇ ಪ್ರಬಲ ವರ್ಗ ಜಾತಿ ಸಮೀಕ್ಷೆಗೆ ವಿರೋಧ ವ್ಕಕ್ತಪಡಿಸುತ್ತಿದೆ ಎಂಬುದು ಪರಿಸ್ಥಿತಿ ಏನೂ ಬದಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
ಈಗ ಕರ್ನಾಟಕ ಆರ್ಥಿಕ-ಸಾಮಾಜಿಕ ಪ್ರಗತಿ ಕಂಡಿದ್ದರೂ ಜಾತಿ ವ್ಯವಸ್ಥೆಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಹಿಂದೆ ಪ್ರಬಲಕೋಮಿಗೆ ಮಾತ್ರ ಪೀಠಾಧಿಪತಿಗಳಿದ್ದರು. ಈಗ ಹಿಂದುಳಿದ ವರ್ಗದವರು ತಮ್ಮ ತಮ್ಮ ಪೀಠಾಧಿಪತಿಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಅವರು ರಾಜಕಾರಣಿಗಳಿಗಿಂತ ಬಿರುಸಾಗಿ ಜಾತೀಯತೆಯನ್ನು ಎತ್ತಿಹಿಡಿಯುತ್ತಿದ್ದಾರೆ. ಎಲ್ಲರಿಗೂ ಈಗ ಎಲ್ಲರಿಗೂ ರಾಜಕೀಯ ಅಧಿಕಾರ ಮತ್ತು ಮೀಸಲಾತಿ ಬೇಕು. ಅದೇ ಈಗ ಸಂಘರ್ಷಕ್ಕೆ ಕಾರಣವಾಗಲಿದೆ. ಜಾತಿ ಸಮೀಕ್ಷೆ ಈ ಸಂಘರ್ಷಕ್ಕೆ ಕಾರಣವಾದರೆ ಆಶ್ಚರ್ಯವೇನೂಇಲ್ಲ.