ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಸ್ ಸ್ಟಾಂಡ್ ಬಳಿ ನಡೆದಿದೆ.
ಕೊಲೆಯಾದ ಯುವತಿಯನ್ನು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮೂಲದ ರೇಖಾ ಎಂದು ಗುರುತಿಸಲಾಗಿದೆ. ಲೋಕೇಶ್ ಎಂಬ ಯುವಕ, ರೇಖಾಳನ್ನು ನಡು ಬೀದಿಯಲ್ಲಿ ಚಾಕು ಇರಿದು ಹತ್ಯೆಗೈದು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ವರದಿಗಳ ಪ್ರಕಾರ, ರೇಖಾ ಮತ್ತು ಲೋಕೇಶ್ ಇಬ್ಬರೂ ನಾಲ್ಕು ತಿಂಗಳಿಂದ ಪರಿಚಿತರಾಗಿದ್ದರು. ರೇಖಾ ಸುಂಕದ ಕಟ್ಟೆಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ತಿರುಗಿದೆ. ಸ್ನೇಹದಿಂದ ಪ್ರೀತಿಯಾಗಿ ಮಾರ್ಪಟ್ಟಿದ್ದು, ಇಬ್ಬರು ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ರೇಖಾಳೇ ಲೋಕೇಶ್‌ಗೆ ತನ್ನ ಕೆಲಸದ ಸ್ಥಳದಲ್ಲಿ ಡ್ರೈವರ್ ಕೆಲಸ ನೀಡಿದ್ದಾಳೆ.
ಈ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇಬ್ಬರ ನಡುವೆ ಕಲಹ ಹುಟ್ಟಿದ್ದು, ಲೋಕೇಶ್ ರೇಖಾ ಮೇಲೆ ಅನುಮಾನ ಪಟ್ಟಿದ್ದಾನೆ. ಇಂದು ಬೆಳಿಗ್ಗೆ 11.30 ರ ಹೊತ್ತಿಗೆ ರೇಖಾ ಬಸ್ಸಿಗಾಗಿ ನಿಂತಿದ್ದಾಗ, ಬಸ್ ಸ್ಟಾಂಡ್ ಬಳಿ ಬಂದ ಲೋಕೇಶ್ ಗಲಾಟೆ ಮಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಲೋಕೇಶ್ ರೇಖಾಗೆ ಚಾಕು ಇರಿದು ಬಸ್ ನಿಲ್ದಾಣದಲ್ಲೇ ಎರಡು ಬಾರಿ ಹಲ್ಲೆ ನಡೆಸಿ, ನಂತರ ಅವರನ್ನು ಕೆಳಗೆ ಬೀಳಿಸಿ ಒಟ್ಟು ಒಂಭತ್ತು ಬಾರಿ ಚಾಕು ಇರಿದಿದ್ದಾನೆ ಎನ್ನಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರೇಖಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೇ ರೇಖಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.