ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರನ್ನು ವಂಚಿಸಲು ಖದೀಮರು ಯತ್ನಿಸಿ ವಿಫಲರಾಗಿದ್ದಾರೆ.
ದೂರಸಂಪರ್ಕ ಸಚಿವಾಲಯದ ಉದ್ಯೋಗಿಯೆಂದು ಸುಳ್ಳು ಹೇಳಿ, “ನಿಮ್ಮ ನಂಬರ್ ಆಧಾರ್‌ಗೆ ಲಿಂಕ್ ಆಗಿಲ್ಲ” ಎಂದು ವೈಯಕ್ತಿಕ ಮಾಹಿತಿ ಪಡೆಯಲು ಸೈಬರ್ ಅಪರಾಧಿ ಪ್ರಯತ್ನಿಸಿದ್ದಾನೆ.
ಅಪರಿಚಿತ ವ್ಯಕ್ತಿಯೊಬ್ಬ ಸೆಪ್ಟೆಂಬರ್ 5 ರಂದು ಸುಧಾ ಮೂರ್ತಿ ಅವರನ್ನು ಕರೆ ಮಾಡಿ, ನಿಮ್ಮ ನಂಬರ್‌ನಿಂದ ಅಶ್ಲೀಲ ವೀಡಿಯೋ ಕಳಿಸಲಾಗುತ್ತಿದೆ, ಅದನ್ನ ನಾನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾನೆ. ಅನುಮಾನಗೊಂಡು, ಅವರು ಕರೆ ಬಂದ ನಂಬರ್ ಅನ್ನು ಟ್ರೂಕಾಲರ್ ಮೂಲಕ ಪರಿಶೀಲಿಸಿದಾಗ, ಟೆಲಿಕಾಂ ಡೆಪಾರ್ಟ್ಮೆಂಟ್ ಎಂದು ಬಂದಿತ್ತು. ಕೂಡಲೇ ಎಚ್ಚೆತ್ತುಕೊಂಡ ಅವರು ಸೈಬರ್ ವಂಚಕರ ಟ್ರ‍್ಯಾಪ್‌ಗೆ ಒಳಗಾಗದೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ (ಸಿ), 66 (ಡಿ), 84 (ಸಿ) ಅಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕೆಲವು ದಿನಗಳ ಹಿಂದೆ ವಂಚಕರು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 3 ಲಕ್ಷ ರೂಪಾಯಿ ದೋಚಿದ್ದರು. ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕನ್ನಡ ನಟ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿದ್ದು, ವಂಚಕರು ಅವರ ಸ್ನೇಹಿತರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದರು.
ಇತ್ತೀಚೆಗೆ ದೂರ ಸಂಪರ್ಕ ಇಲಾಖೆ ಅಧಿಕಾರಿಗಳು, ಇಡಿ, ಸಿಬಿಐ ಸೇರಿದಂತೆ ವಿವಿಧ ಸರ್ಕಾರಿ ಸರ್ಕಾರೀ ಇಲಾಖೆ ಹೆಸರು ಹೇಳಿಕೊಂಡು ಸೈಬರ್ ವಂಚಕರು ಜನ ಸಾಮಾನ್ಯರು ಹಾಗೂ ಸೆಲೆಬ್ರಿಟಿಗಳ ಹಣ ದೋಚುತ್ತಿದ್ದಾರೆ. ಹೀಗಾಗಿ ಯಾವುದೇ ಅಪರಿಚಿತ ಕರೆ ಬಂದರೆ ಎಚ್ಚರಿಯಿಂದ ಇರಿ ಹಾಗೂ ನಿ ಮ್ಮ ವೈಯಕ್ತಿ ವಿವರ ಕೇಳಿದರೆ ನೀಡಬೇಡಿ.