ಬೆಳಗಾವಿಯ ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಮೃತಪಟ್ಟ ಯುವತಿಯನ್ನು ಸುಮಿತ್ರಾ (19), ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಇಂದು (ಸೆಪ್ಟೆಂಬರ್ 22) ಬೆಳಿಗ್ಗೆ ಟಿಫನ್ ತೆಗೆದುಕೊಂಡು ರೂಮ್ ಗೆ ಹೋದವಳು ಹೊರಗಡೆ ಬಂದಿಲ್ಲ. ಸ್ನೇಹಿತರು ಕೊಠಡಿ ಬಳಿ ಬಂದು ಬಾಗಿಲು ಬಡಿದರೂ ಸಹ ಸುಮಿತ್ರಾ ಬಾಗಿಲು ತೆರೆದಿಲ್ಲ. ಬಳಿಕ ಬಾಗಿಲು ಮುರಿದು ಪರಿಶಿಲನೆ ನಡೆಸಿದಾಗ ಸುಮಿತ್ರಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಸಾಲ ಮಾಡಿ ನರ್ಸಿಂಗ್ ಓದಿಸುತಿದ್ದ, ಪಾಲಕರು ನವರಾತ್ರಿ ಹಬ್ಬದ ದಿನದಂದು ಕಣ್ಣೀರು ಹಾಕುವಂತಾಗಿದೆ.
ಹಾಸ್ಟೆಲ್ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ಒಳಗೆ ನೇಣು ಬಿಗಿದುಕೊಂಡಿದ್ದ ಸುಮಿತ್ರಾಳನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. “25 ಸಾವಿರ ರೂ. ಸಾಲ ಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದ್ದೆ. ನನ್ನ ಮಗಳಿಗೆ ಏನಾಯಿತು ಹೇಳಿ…” ಎಂದು ತಂದೆ ದುಂಡಪ್ಪ ಅವರು ವಾರ್ಡನ್ ಕಾಲಿಗೆ ಬಿದ್ದು ಗೋಳಾಡಿದರು.
ಹಾಸ್ಟೆಲ್ ರೂಮಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಠಡಿಯ ತಪಾಸಣೆಯಲ್ಲಿ ಡೆತ್ ನೊಟ್ ಪತ್ತೆಯಾಗಿದ್ದು, “ನನ್ನ ಸಾವಿಗೆ ನಾನೇ ಕಾರಣ” ಎಂದು ಅವಳು ಬರೆದಿದ್ದಾಳೆ.
ಪೊಲೀಸರು ಮೃತದೇಹವನ್ನು ಬಿಮ್ಸ್ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದು, ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.