Monday, September 22, 2025
Menu

ಜಾತಿಗಣತಿ ಮುಂದೂಡಲು ಆಗ್ರಹ: ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಕೆ

mallikarjun kharge

ಇಂದಿನಿಂದ ಕರ್ನಾಟಕದಾದ್ಯಂತ ಆರಂಭವಾಗಿರುವ ಜಾತಿ ಜನಗಣತಿ (ಸಾಮಾಜಿಕ, ಆರ್ಥಿಕ, ಶೈಕ್ಷಣಿಕ) ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಆಗ್ರಹಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಭೇಟಿಯಾಗಿ 15 ದಿನಗಳಲ್ಲಿ ಸಮೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ಜಾತಿಗಣತಿ ಸಮೀಕ್ಷೆಯನ್ನು 3 ತಿಂಗಳು ಕಾಲ ಮುಂದೂಡಬೇಕೆಂದು ಒತ್ತಾಯಿಸಿದರು.

ರಾಜ್ಯ ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಡಿಟರ್ ನಾಗರಾಜ್ ಯಲಚವಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಖರ್ಗೆ ಅವರನ್ನು ಭೇಟಿ ಮಾಡಿ ಜಾತಿಗಣತಿ ಸಮೀಕ್ಷೆ ಮುಂದೂಡಬೇಕೆಂದು ಮನವಿ ಮಾಡಿದ್ದೇವೆ. ಸಮೀಕ್ಷೆ ನಡೆಸಲು ಇನ್ನೂ ಎಲ್ಲಾ ಮನೆಗಳಿಗೆ ನಂಬರ್‌ ನೀಡಿಲ್ಲ. ರಾಜ್ಯದಲ್ಲಿ 15ರಿಂದ 20 ಪ್ರಮುಖ ಜಾತಿಗಳಿದ್ದು, ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಯಾದವ, ಬಲಿಜ ಸೇರಿದಂತೆ ಎಲ್ಲ ಸಮುದಾಯಗಳಿಗೆ ಹಾಗೂ ಉಪಜಾತಿಗಳಿಗೆ ಪ್ರತ್ಯೇಕ ಕೋಡ್ ನೀಡಬೇಕು” ಎಂದು ತಿಳಿಸಿದರು.

“2012ರಲ್ಲಿ 800 ಜಾತಿಗಳನ್ನು ದಾಖಲಿಸಲಾಗಿತ್ತು. ಈಗ ಅದು 1561ಕ್ಕೆ ಏರಿಕೆಯಾಗಿದೆ. ಇನ್ನು ಜಾತಿ ಇಯರಿಂಗ್ ಹಾಗೂ ಕುಲಶಾಸ್ತ್ರ ಅಧ್ಯಯನ ಕೂಡ ನಡೆದಿಲ್ಲ”, ಎಂದು ದೂರಿದರು. “ಮೂರುವರೆ ಕೋಟಿ ಜನಸಂಖ್ಯೆಯಿರುವ ತೆಲಂಗಾಣದಲ್ಲಿ 45 ದಿನ ತೆಗೆದುಕೊಂಡು ಸಮೀಕ್ಷೆ ಮಾಡಿದ್ದಾರೆ. ನಾವು ಕರ್ನಾಟಕದಲ್ಲಿ ಏಳೂವರೆ ಕೋಟಿ ಜನರು ಇದ್ದೇವೆ , 15 ದಿನದಲ್ಲಿ ಸರ್ವೇ ಮಾಡಲು ಸಾಧ್ಯವಿಲ್ಲ,” ಎಂದು ಹೇಳಿದರು.

ಹಿಂದುಳಿದ ವರ್ಗದ ಆಯೋಗದ ಸಮೀಕ್ಷೆ ಪಡೆಯುವ ಪ್ರತಿನಿಧಿಗಳಿಗೆ ಮೊಬೈಲ್ ಆ್ಯಪ್‌ ನಲ್ಲಿ ಮಾಹಿತಿ ಅಪ್ ಲೋಡ್‌ ಮಾಡಲು ಸೂಕ್ತ ತರಬೇತಿ ನೀಡಿಲ್ಲ, ತರಬೇತಿದಾರರಿಗೆ ಸರಿಯಾದ ಮಾಹಿತಿ ಕೂಡ ಇಲ್ಲ. ಒಕ್ಕಲಿಗ ಸಮುದಾಯದ ಸಭೆಯಲ್ಲೂ ಮುಂದೂಡುವಂತೆ ಮನವಿ ಮಾಡಲಾಗಿತ್ತು. ಆ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆಯವರ ಗಮನಕ್ಕೆ ತರಲಾಗಿದೆ. 15 ದಿನಗಳಲ್ಲಿ 20 ಗಂಟೆ ಕೆಲಸ‌ ಮಾಡಲು ಸಾಧ್ಯವಿಲ್ಲ, ಹಾಗಾಗಿ 3 ತಿಂಗಳು ಗಣತಿ ಕಾರ್ಯವನ್ನು ‌ಮುಂದೂಡುವಂತೆ‌ ಮನವಿ ಮಾಡಿದ್ದೇವೆ.

 

Related Posts

Leave a Reply

Your email address will not be published. Required fields are marked *