Monday, September 22, 2025
Menu

ಬಗರಮ್ ವಾಯು ನೆಲೆಯ ಒಂದಿಂಚೂ ಕೊಡಲ್ಲ: ಟ್ರಂಪ್‌ಗೆ ಆಫ್ಘನ್‌ ಸವಾಲು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪವಿರುವ ಬಗರಮ್ ವಾಯು ನೆಲೆಯನ್ನು ಅಮೆರಿಕ ವಶಕ್ಕೆ ಮತ್ತೆ ಒಪ್ಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಿದ್ದು, ತಾಲಿಬಾನ್ ಅದನ್ನು ತಿರಸ್ಕರಿಸಿದೆ. ವಾಯುನೆಲೆಯನ್ನು ಅಮೆರಿಕಕ್ಕೆ ಒಪ್ಪಿಸುವುದು ಇರಲಿ, ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.

ದೋಹಾ ಒಪ್ಪಂದದಡಿ ಅಮೆರಿಕವು ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕಾಗಲೀ ರಾಜಕೀಯ ಸ್ವಾತಂತ್ರ್ಯಕ್ಕಾಗಲೀ ಧಕ್ಕೆಯಾಗುವ ರೀತಿಯಲ್ಲಿ ಬಲ ಪ್ರಯೋಗ ಮಾಡುವಂತಿಲ್ಲ. ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಅಮೆರಿಕ ಕೊಟ್ಟ ಮಾತಿಗೆ ಬದ್ಧವಾಗಿರಬೇಕು. ವಿಫಲ ಪ್ರಯತ್ನಗಳನ್ನೇ ಮತ್ತೆ ಮತ್ತೆ ಮಾಡುವ ಬದಲು ವಾಸ್ತವಕ್ಕೆ ಹತ್ತಿರ ಇರುವ ನೀತಿ ಅನುಸರಿಸಬೇಕು ಎಂದು ಅಫ್ಘಾನಿಸ್ತಾನ ಸರ್ಕಾರವು ಹೇಳಿದೆ.

ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಸೇನೆಗಳು ಅಫ್ಘಾನಿಸ್ತಾನದ ಬಗರಮ್ ವಾಯುನೆಲೆಯನ್ನು ತ್ಯಜಿಸಿ ಸ್ವದೇಶಕ್ಕೆ ವಾಪಸಾಗಿವೆ. ಅಮೆರಿಕ ಬೆಂಬಲಿತ ಸರ್ಕಾರ ಪತನಗೊಂಡು ತಾಲಿಬಾನ್ ಆಡಳಿತ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಅಮೆರಿಕ ಸೇನೆ ನಿರ್ಗಮಿಸಿತ್ತು. ಆಗ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದರು. ಈಗ ಅಧ್ಯಕ್ಷರಾಗಿರುವ ಟ್ರಂಪ್ ತಾವು ಹಿಂದೆ ಸರಿದಿದ್ದ ಬಗರಮ್ ಅನ್ನು ಮತ್ತೆ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಬಗರಮ್ ಏರ್​ಬೇಸ್ ಅನ್ನು ನಾವೇ ನಿರ್ಮಿಸಿದ್ದೇವೆ. ನಮಗೆ ಅದನ್ನು ಬಿಟ್ಟುಕೊಡದಿದ್ದರೆ ಕೆಟ್ಟ ಬೆಳವಣಿಗೆ ನಡೆಯಲಿವೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಫ್ಘನ್‌ ಸೆಂಟ್ರಲ್ ಏಷ್ಯಾ ಸಮೀಪ ಇರಾನ್, ರಷ್ಯಾ, ಚೀನಾ, ಪಾಕಿಸ್ತಾನ ದೇಶಗಳಿಗೆ ಹೊಂದಿಕೊಂಡಂತೆ ಇದೆ. ಈ ವಾಯುನೆಲೆಯು ಚೀನಾದ ಸೂಕ್ಷ್ಮ ಪರಮಾಣ ಘಟಕಗಳಿರುವ ಶಿನ್​ಜಿಯಾಂಗ್ ಪ್ರಾಂತ್ಯಕ್ಕೆ ಹತ್ತಿರವಿದೆ. ಸೆಂಟ್ರಲ್ ಏಷ್ಯಾದಲ್ಲಿ ಅಮೆರಿಕದ ಹಿಡಿತ ಬಲಪಡಿಸುವಲ್ಲಿ ಬಗರಮ್ ಏರ್​ಬೇಸ್ ಬಹಳ ಮುಖ್ಯ ಪಾತ್ರ ವಹಿಸುವುದು. ರಷ್ಯಾ, ಚೀನಾ, ಭಾರತದಂತಹ ಶಕ್ತಿಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಲು ಸಹಕಾರಿಯಾಗಬಹುದು.

ಬಗರಮ್ ಏರ್​ಬೇಸ್ ನಿರ್ಮಿಸಿದ್ದು ಸೋವಿಯತ್ ಒಕ್ಕೂಟ. ಅಮೆರಿಕ ಅಭಿವೃದ್ಧಿ ಮಾಡಿದೆ. ಸಕಲ ಮೂಲಸೌಕರ್ಯಗಳಿವೆ. ಇದು ತನ್ನ ಅಧೀನದಲ್ಲಿದ್ದರೆ ಸುತ್ತಲಿನ ರಾಷ್ಟ್ರಗಳ ಮೇಲೆ ಕಣ್ಣಿಡಲು, ಬೆದರಿಸಲು ಸುಲಭವೆಂದು ಅಮೆರಿಕದ ವಾಯುನೆಲೆಯನ್ನು ವಾಪಸ್ ಕೇಳುತ್ತಿದೆ.

Related Posts

Leave a Reply

Your email address will not be published. Required fields are marked *