ಬೆಂಗಳೂರಿನ ಯಲಹಂಕದ ಮನೆಯೊಂದಕ್ಕೆ ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಬಂದ ವಂಚಕರು ಮನೆಯವರನ್ನು ನಂಬಿಸಿ ಮನೆಯಲ್ಲಿದ್ದ ಒಂದೂವರೆ ಕೋಟಿ ರೂ. ಹಾಗೂ 50 ಗ್ರಾಂನ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಯಲಹಂಕ ನಿವಾಸಿ ಗಿರಿರಾಜು ಎಂಬವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಕಾರಿನಲ್ಲಿ ಬಂದಿದ್ದ ನಾಲ್ವರು ತಾವು ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡಿದ್ದರು. ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಗಿರಿರಾಜು ಹೇಳಿದ್ದರು. ಹಣ ಎಲ್ಲಿದೆ ಎಂದು ಕೇಳಿದ್ದರು. ಜಮೀನು ಖರೀದಿಗಾಗಿ ಗಿರಿರಾಜು ಅವರು ಒಂದೂವರೆ ಕೋಟಿ ರೂ. ತಂದು ಮನೆಯಲ್ಲಿಟ್ಟಿದ್ದರು. ಅಡುಗೆ ಮನೆಯಲ್ಲಿಟ್ಟಿದ್ದ ಆ ಹಣವನ್ನು ತೆಗೆದುಕೊಂಡಿದ್ದಾರೆ.
ಗಿರಿರಾಜು ಎಲ್ಲಿದ್ದಾರೆ ಎಂದು ಮನೆಯವರಲ್ಲಿ ಕೇಳಿದ್ದರು. ಅವರು ಇಲ್ಲ ಎಂದಾಗ ಹಣದ ಬ್ಯಾಗ್ ಮತ್ತು 50 ಗ್ರಾಂ ಚಿನ್ನಾಭರಣವನ್ನು ತೆಗೆದುಕೊಂಡು ನಾಲ್ವರು ಆರೋಪಿಗಳು ಪರಾರಿಯಾಗಿದ್ದರು. ಯಲಹಂಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದ್ದು, ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.