ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಕೆಲವು ದಿನಗಳ ಹಿಂದೆ ವಂಚಕರು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 3 ಲಕ್ಷ ರೂಪಾಯಿ ದೋಚಿದ್ದರು. ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿದ್ದು, 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಸಂಸದ ಡಾ. ಕೆ ಸುಧಾಕರ್ ಪತ್ನಿ ಡಾ. ಪ್ರೀತಿ ಅವರಿಗೆ ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ಬೆಳಿಗ್ಗೆ 9:30ಕ್ಕೆ ಕರೆ ಬಂದಿತ್ತು. ಮುಂಬೈ ಸೈಬರ್ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ದಾಖಲೆಗಳನ್ನು ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡಿದ್ದಾನೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ವಂಚಕ ಹೇಳಿದ್ದಾನೆ.
ವಿದೇಶಕ್ಕೆ ಕಾನೂನುಬಾಹಿರವಾಗಿ ಚಟುವಟಿಕೆ ನಡೆಸಲು ಆತ ಜನರನ್ನು ಕಳುಹಿಸಿದ್ದಾನೆ. ಸದ್ಬತ್ ಖಾನ್‌ರನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಇದರ ವಿಚಾರಣೆ ನಡೆಸುವುದಕ್ಕೆ ವೀಡಿಯೊ ಕಾಲ್ ಮಾಡುತ್ತಿದ್ದೇವೆ. ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ವಂಚಕ ಬೆದರಿಸಿದ್ದ.
ನಿಮ್ಮ ಅಕೌಂಟ್ ಅಕ್ರಮವಾಗಿದ್ದು ಹಣ ಹಾಕಿ ಎಂದು ಹೆದರಿಸಿದ್ದಕ್ಕೆ ಪ್ರೀತಿ ಅವರು 14 ಲಕ್ಷ ಹಣ ವಂಚಕರ ಖಾತೆಗೆ ಹಾಕಿದ್ದಾರೆ. ಆರ್‌ಬಿಐ ನಿಯಮ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ಹಣ ವಾಪಸ್ ನಿಮ್ಮ ಖಾತೆಗೆ ವರ್ಗಾಯಿಸುವುದಾಗಿಯೂ ವಂಚಕ ಹೇಳಿದ್ದ. ಪ್ರೀತಿ ಅವರಿಂದ 14 ಲಕ್ಷ ಹಣವನ್ನು ವಂಚಕರು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದಾರೆ. ಹಣ ಹಾಕಿದ ನಂತರ ವಂಚನೆಯಾಗಿರುವುದು ಗೊತ್ತಾಗಿದೆ. ಪ್ರೀತಿ ಸುಧಾಕರ್ ನೀಡಿದ ದೂರಿನ ಅನ್ವಯ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.