ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟಿಸಲಾಗಿದ್ದು, ಪಂಚಮಸಾಲಿ ಸಮುದಾಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಅಖಿಲ ಭಾರತ ಲಿಂಗಾಯ ಪಂಚಮಸಾಲಿ ಸಮಾಜ ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿಗಳ ಉಚ್ಛಾಟನೆ ನಿರ್ಧಾರ ಕೈಗೊಳ್ಳಲಾಗಿದ್ದು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಸಮುದಾಯದ ಮುಖಂಡರ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಕ್ರಮ ಆಸ್ತಿ ಗಳಿಕೆ, ಲಿಂಗಾಯ ಧರ್ಮ ವಿರೋಧಿ ಹೇಳಿಕೆ, ಅವರ ಪೀಠದಲ್ಲಿ ಆ್ಯಕ್ಟಿವ್ ಆಗಿ ಇಲ್ಲದಿರುವುದು, ಸನ್ಯಾಸಿಗೆ ಇರುವಂತಹ ಮೂಲಭೂತ ಲಕ್ಷಣ ಕಡಿಮೆ ಆಗಿರುವುದು ಉಚ್ಛಾಟನೆ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದ ಅಸೂಟಿ, ಕೂಡಲಸಂಗಮದಲ್ಲಿ ಇನ್ನು ಮುಂದೆ ಪ್ರಸಾದ ನಿಲಯ ಆರಂಭಕ್ಕೆ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ವಾಮೀಜಿಗಳ ಬಗ್ಗೆ ಸಾಕಷ್ಟು ಆರೋಪಗಳಿದ್ದವು. ಅವರು ಟ್ರಸ್ಟ್ ನ ಮಾತು ಕೇಳುತ್ತಿರಲಿಲ್ಲ. ಬೈಲಾದ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದಿತ್ತು. ಜತೆಗೆ ಸಮಾಜ ಒಡೆಯುವ ಕೆಲಸ ಮಾಡಿದ್ದರು. 2014ರಲ್ಲಿಯೇ ಇದಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಸಭೆಯಲ್ಲಿ ಟ್ರಸ್ಟ ನ 30 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು ಇದೆಲ್ಲದರ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ನಂತರ ಅವರ ಉಚ್ಛಾಟನೆ ನಿರ್ಧಾರ ಕೈಗೊಳ್ಳಾಯಿತು ಎಂದು ಅಸೂಟಿ ಮಾಧ್ಯಮಗಳಿಗೆ ತಿಳಿಸಿದರು.
ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಕಾರು ಸೇರಿದಂತೆ ಎಲ್ಲವನ್ನು ಕೊಡಿಸಿದ್ದೇವೆ. ಆದರೂ ಅವರು ಬಸವ ತತ್ತ್ವದ ವಿರುದ್ಧವಾಗಿಯೇ ನಡೆದುಕೊಂಡಿದ್ದಾರೆ. ಬಸವ ತತ್ತ್ವದಲ್ಲಿ ನಾವು ಯಾವತ್ತು ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಈ ಸ್ವಾಮೀಜಿಗಳು ಹಿಂದೂ ಧರ್ಮ ಬಳಕೆ ಮಾಡುತ್ತಾರೆ ಎಂದರೆ ಇವರನ್ನು ಪೀಠದಲ್ಲಿ ಏಕೆ ಇಟ್ಟುಕೊಳ್ಳಬೇಕು ಹೇಳಿ ಎಂದರು.
ಉಚ್ಚಾಟನೆಯ ವಿಷಯ ತಿಳಿಯುತ್ತಿದ್ದಂತೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿ, ಬದಲಾವಣೆ ಬಯಸಿದಂತಹ ವ್ಯಕ್ತಿಗಳಿಗೆ ತೊಂದರೆ ಕೊಡುವುದು ಸಹಜ. ಅದು ಯಾರನ್ನೂ ಬಿಟ್ಟಿಲ್ಲ. ಬಸವಣ್ಣನವರನ್ನು ಬಿಟ್ಟಿಲ್ಲ, ಅಂಬೇಡ್ಕರ್‌ರವರನ್ನು ಸಹ ಬಿಟ್ಟಿಲ್ಲ ಎಂದು ಹೇಳಿದ್ದಾರೆ.