ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ವ್ಯಾಪಕವಾಗಿದ್ದು, ಈ ವರ್ಷ ಸೋಂಕಿಗೆ 19 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆ ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಭಯ ಪಡುವ ಅವಶ್ಯಕತೆ ಇಲ್ಲ ಎಂದು ಕೆ.ಸಿ ಜನರಲ್ ಆಸ್ಪತ್ರೆ ವೈದ್ಯ ಡಾ ಸುರೇಶ್ ಹೇಳಿದ್ದಾರೆ.
ಕೇರಳದಲ್ಲಿ ಈ ಸೋಂಕು ನೆಗ್ಲಿರಿಯಾ ಫೊವ್ಲೆರಿ ಎಂಬ ಅಮೀಬಾದಿಂದ ಹರಡುತ್ತದೆ. ಅಲ್ಲಿ 67 ಜನರು ಸೋಂಕಿತರಾಗಿದ್ದಾರೆ. ಅಲ್ಲಿನ ರಾಜ್ಯ ಸರ್ಕಾರ ಸೋಂಕು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತದೆ ಎಂಬುದು ಗಮನಾರ್ಹ. ಅಂತಹ ನೀರಿನಲ್ಲಿ ಈಜಾಡಿದರೆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳು ಹೊಕ್ಕು ಕೇಂದ್ರ ನರವ್ಯೂಹದ ಮೇಲೆ ದಾಳಿ ಮಾಡುತ್ತದೆ. ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವಿಗೂ ಕಾರಣವಾಗುತ್ತದೆ. ಸೋಂಕು ತಗುಲಿದ 1 ರಿಂದ 9 ದಿನಗಳಲ್ಲಿ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ.
ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ, ಈಜು ಮಾಡಬಾರದು, ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸುವುದು. ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು. ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.