ಕೆಮ್ಮಣ್ಣುಗುಂಡಿಯ ಪ್ರವಾಸಿ ತಾಣದ ವೀವ್ ಪಾಯಿಂಟ್ನಲ್ಲಿ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಗಂಡ ಆಳದ ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿರುವಂತಹ ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಸಂತೋಷ್ (40) ಮೃತಪಟ್ಟವರು.
ಸಂತೋಷ್ ಮತ್ತು ಹೆಂಡತಿ ಶ್ವೇತ ಕೆಮ್ಮಣ್ಣುಗುಂಡಿ ನೋಡಲು ಬಂದಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಣೆ ಮಾಡಿದ ಬಳಿಕವೀವ್ ಪಾಯಿಂಟ್ ಬಳಿಗೆ ತೆರಳಿ ಸೆಲ್ಫಿ ತೆಗೆಯಲು ಮುಂದಾಗಿದ್ದರು. ಪ್ರಪಾತದ ತುದಿಯಲ್ಲಿ ನಿಂತಿದ್ದ ಸಂತೋಷ್ ಕಾಲು ಜಾರಿ ನೂರಾರು ಅಡಿ ಆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಕಲ್ಲು ಬಂಡೆಗಳು ಬಡಿದು ಸ್ಥಳದಲ್ಲೇ ಅಸು ನೀಗಿದ್ದಾರೆ. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಂತೋಷ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಶ್ವೇತ ಜೊತೆ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ತರೀಕೆರೆ ತಾಲೂಕಿನಲ್ಲಿರುವ ಲಕ್ಷ್ಮೀಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ದಸರಾ ರಜೆ ಹಿನ್ನಲೆ ಕೆಮ್ಮಣ್ಣುಗುಂಡಿಗೆ ಹೆಂಡತಿ ಜೊತೆ ಪ್ರವಾಸಕ್ಕೆ ಬಂದಿದ್ದರು.
ಮೃತ ದೇಹವನ್ನ ಹಗ್ಗದ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.