Sunday, September 21, 2025
Menu

ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರು ಹಿಂದುಳಿದವರೇ : ಸಿಎಂ ಸಿದ್ದರಾಮಯ್ಯ 

ಕರಾವಳಿ ಮತ್ತು ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಬೇಸರ ವ್ಯಕ್ತಪಡಿಸಿ, ಹಿಂದುಳಿದ ಜಾತಿಯವರ ಮಕ್ಕಳೇ ಧರ್ಮದ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷ ಬಲಿಯಾಗಬೇಕು ಎಂದು ಪ್ರಶ್ನಿಸಿದರು.‌

ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ಕನಕೋತ್ಸವ ಉದ್ಘಾಟಿಸಿ ಮಾತನಾಡಿದರು. ಅಸಮಾನತೆ, ಜಾತಿ ಶೋಷಣೆಯಿಂದ ಲಾಭ ಮಾಡಿಕೊಳ್ಳುತ್ತಿರುವವರು ಸಮಾಜದ ಬದಲಾವಣೆಗೆ ವಿರೋಧವಿದ್ದಾರೆ. ಇವರು ಹಿಂದುಳಿದವರ ಮನೆಯ ಮಕ್ಕಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರುವುದನ್ನು ಸಹಿಸುವುದಿಲ್ಲ. ಹೀಗಾಗಿ ದೇವರು, ಧರ್ಮದ ಹೆಸರಿನಲ್ಲಿ ಹಿಂದುಳಿದ ಜಾತಿಗಳ ಮನೆಯ ಮಕ್ಕಳನ್ನೇ ಬಲಿ ಆಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಹಿಂದುಳಿದವರ ಮಕ್ಕಳನ್ನು ಬಲಿ ಕೊಡುವವರ ಮಾತು ಕೇಳಿಕೊಂಡು ನಾವು ತಲೆ ಆಡಿಸುತ್ತಾ ಕೂರಬಾರದು ಎಂದು ಹೇಳಿದರು.

ಶಿಕ್ಷಣ-ಸಂಘಟನೆ-ಹೋರಾಟ ಎನ್ನುವುದು ಅಂಬೇಡ್ಕರ್ ಅವರು ಶೋಷಿತ, ಹಿಂದುಳಿದ ಜಾತಿ ಸಮುದಾಯಗಳಿಗೆ ಕೊಟ್ಟ ಮಂತ್ರವಾಗಿದೆ. ಈ ಮೂರೂ ಮಂತ್ರಗಳ ಮೂಲಕ ಶೋಷಿತ ಜಾತಿ ಸಮುದಾಯಗಳು ಶಿಕ್ಷಣ ಪಡೆದು ದೊಡ್ಡ ಸಂಘಟನೆ ಮಾಡಿಕೊಳ್ಳುವ ಮೂಲಕ ಹೋರಾಟದ ಹಾದಿಯಲ್ಲಿ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಜಾತಿ ವ್ಯವಸ್ಥೆಯಲ್ಲಿ ಜಾತಿ ಇರುವವರೆಗೂ ಸಮಾನತೆ ಬರುವುದಿಲ್ಲ. ಇದಕ್ಕೆ ಶಿಕ್ಷಣ ಮತ್ತು ಸಂಘಟನೆಯೇ ಪರಿಹಾರ ಎಂದರು.

ಶಿಕ್ಷಣ ಎಂದರೆ ಪ್ರಗತಿಪರ ಮತ್ತು ವೈಜ್ಞಾನಿಕವಾದ ಹಾಗೂ ವಿಚಾರಶೀಲವಾದ ಶಿಕ್ಷಣ ಪಡೆಯಬೇಕು. ಈಗ ಶಿಕ್ಷಿತರು ಎಂದು ಹೇಳಿಕೊಳ್ಳುವ ವೈದ್ಯರು, ಎಂಜಿನಿಯರ್ ಗಳೂ ಮೌಡ್ಯ, ಕಂದಾಚಾರವನ್ನು ಪಾಲಿಸುತ್ತಿದ್ದಾರೆ. ಶಿಕ್ಷಿತರೇ ಹೆಚ್ಚು ಜಾತಿವಾದಿಗಳಾಗಿ ಸಮಾಜದ ಪ್ರಗತಿಗೆ ಅಡ್ಡಿಯಾಗಿದ್ದಾರೆ. ಸಹೋದರತ್ವ, ಸಮಾನತೆ ಮತ್ತು ಪರಧರ್ಮ ಸಹಿಷ್ಣುತೆ ನಮ್ಮ ಸಂವಿಧಾನ ನೀಡಿರುವ ಮಹೋನ್ನತ ಮೌಲ್ಯಗಳಾಗಿವೆ. ಈ. ಮೌಲ್ಯಗಳೇ ಹಿಂದುಳಿದ ಜಾತಿ, ಸಮುದಾಯಗಳಿಗೆ ದೊಡ್ಡ ಶಕ್ತಿ ಆಗಿದೆ ಎಂದು ಹೇಳಿದರು.

ನಾಡ ಹಬ್ಬಕ್ಕೆ ಬಾನು ಮುಷ್ತಾಕ್: ಸುಪ್ರೀಂಕೋರ್ಟ್  ಸ್ವಾಗತಿಸಿದ್ದಕ್ಕೆ ಸಿಎಂ ಮೆಚ್ಚುಗೆ

ನಾಡ ಹಬ್ಬ ದಸರಾ ಉದ್ಘಾಟನೆಗಾಗಿ ಈ ನಾಡಿಗೆ ಬೂಕರ್ ಪ್ರಶಸ್ತಿ ಮೂಲಕ ಘನತೆ ತಂದ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದೆವು. ಇದಕ್ಕೆ ಎರಡು ಬಾರಿ ಸಂಸದರಾಗಿ ಈ ಮಾಜಿ ಆಗಿರುವ ವ್ಯಕ್ತಿ ವಿರೋಧಿಸಿ ಸಣ್ಣತನ‌ ತೋರಿಸಿದರು. ಆದರೆ ಸುಪ್ರೀಂಕೋರ್ಟ್ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದು ಮೆಚ್ಚುಗೆ ಸೂಚಿಸಿದರು.

ಜಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಅವರವರ ಜಾತಿ ಹೆಸರನ್ನು ನಮೂದಿಸಬೇಕು. ಹಾಗೆಯೇ ಕುರುಬ ಸಮುದಾಯ ಕೂಡ ಜಾತಿ ಕಾಲಂನಲ್ಲಿ ಕೇವಲ ಕುರುಬ ಎಂದಷ್ಟೆ ದಾಖಲಿಸಿ ಎಂದು ಕರೆ ನೀಡಿದರು.

ನಾವು ಎಲ್ಲಾ ಜಾತಿ, ಎಲ್ಲಾ ಧರ್ಮ ಮತ್ತು ಎಲ್ಲಾ ಪಕ್ಷದವರಿಗಾಗಿ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳಿಂದ ರಾಜ್ಯದ ಜನತೆ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ. ತಲಾ ಆದಾಯದಲ್ಲಿ ದೇಶದಲ್ಲಿ ನಾವೇ ನಂಬರ್ ಒನ್ ಆಗಿರುವುದೇ ರಾಜ್ಯದ ಆರ್ಥಿಕತೆ ಪ್ರಗತಿಯಲ್ಲಿರುವುದಕ್ಕೆ ಸ್ಪಷ್ಟ ಸಾಕ್ಷಿ ಎಂದರು.

ಸಚಿವರಾದ ಎಚ್.ಕೆ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್, ಶಾಸಕರಾದ ರಾಘವೇಂದ್ರ ಹಿಟ್ನಾಳ್ , ರಾಕೇಶ್ ಧವನ್ ಸಿದ್ದರಾಮಯ್ಯ ಸೇರಿ ಮಾಜಿ ಸಚಿವರು, ಶಾಸಕರು ಹಾಗೂ ಸಮುದಾಯದ ಮುಖಂಡರು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *