Sunday, September 21, 2025
Menu

ಜಾತಿಗಣತಿ ಮೇಲೆ ಹೈಕೋರ್ಟ್ ತೂಗುಕತ್ತಿ !

ಒಟ್ಟಿನಲ್ಲಿ ರಾಜ್ಯದಲ್ಲಿ ಈಗ ಜಾತಿಗಣತಿ ಸಮೀಕ್ಷೆ ಮುಂದುವರಿಯಲಿದೆಯೇ ಇಲ್ಲವೇ ಇದು ಈ ಹಂತದಲ್ಲಿಯೇ ಸ್ಥಗಿತಗೊಳ್ಳಲಿದೆಯೇ ಎಂಬುದು ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ.

ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯ ಜಿಜ್ಞಾಸೆ ಮುಂದುವರಿದಿದೆ. ಸಮೀಕ್ಷೆಯ ಕೆಲವೊಂದು ಅಂಶಗಳು ಬಹುತೇಕ ಜಾತಿ, ಸಮುದಾಯದಲ್ಲಿ ಗೊಂದಲ ಮತ್ತು ಜಟಿಲತೆಯನ್ನು ಹುಟ್ಟು ಹಾಕಿವೆ. ಕ್ರಿಶ್ಚಿಯನ್ ಎಂಬ ಉಪಪದವನ್ನು ಹಿಂದು ಜಾತಿಗಳಿಗೆ ಸೇರಿಸುವ ಆಯೋಗದ ತೀರ್ಮಾನಕ್ಕೆ ಒಕ್ಕಲಿಗ ವೀರಶೈವ ಮೊದಲಾದ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ರೀತಿಯಾದ ಉಪಪದವನ್ನು ಒಳಗೊಂಡ ಸಮೀಕ್ಷೆಯ ಔಚಿತ್ಯವನ್ನು ಪ್ರಮುಖ ಜಾತಿ ಸಮುದಾಯಗಳು ನೇರವಾಗಿ ಪ್ರಶ್ನಿಸಿವೆ. ಇನ್ನು ಕೆಲ ಜಾತಿಗಳು ಸರ್ಕಾರ ಕೈಗೆತ್ತಿಕೊಂಡ ಸಮೀಕ್ಷೆಯನ್ನು ಕೈ ಬಿಡಲು ಆಗ್ರಹಿಸಿ ಬೀದಿಗಿಳಿದಿವೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವೀಗ ಕೈಗೆತ್ತಿಕೊಂಡಿರುವ ಜಾತಿಗಣತಿ ಸಮೀಕ್ಷೆಗೆ ಆರಂಭದಲ್ಲಿಯೇ ಹಲವು ಹತ್ತು ತೊಡಕುಗಳು ಎದುರಾಗಿವೆ.

ಜಾತಿ ಸಮೀಕ್ಷೆ ನಡೆಸುವ ಉದ್ದೇಶವಿಲ್ಲಿ ಅತಿ ಮುಖ್ಯ. ಸಂವಿಧಾನಾತ್ಮಕವಾಗಿ ಸಮಾಜದಲ್ಲಿ ಯಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರೋ, ಅಂತವರಿಗೆ ಸರ್ಕಾರದಿಂದ ಸೂಕ್ತ ಮತ್ತು ಸಮರ್ಪಕ ಮೀಸಲು ಸವಲತ್ತು ನೀಡಬೇಕೆಂಬುದು ಪರಮಾಶಯ. ಈ ವಿಚಾರದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಪಾತ್ರ ಅತಿ ಮುಖ್ಯ. ಈ ಆಯೋಗವು ಈ ದಿಶೆಯಲ್ಲಿ ಕೈಗೊಳ್ಳುವ ತೀರ್ಮಾನವೂ ಬಹಳ ಮುಖ್ಯವಾದುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಜಾತಿಗಣತಿ ಸಮೀಕ್ಷೆಗಳು ದಿಕ್ಕು ತಪ್ಪಬಾರದು. ಆಯೋಗದ ಬಳಿಯಿರುವ ವಿವಿಧ ಮಾನದಂಡಗಳ ಮೂಲಕ ಸಮೀಕ್ಷೆ ನಡೆಯಬೇಕಿದೆ ಮತ್ತು ಇದನ್ನು ನಿಖರ ಮತ್ತು ಪಾರದರ್ಶಕವಾಗಿ ನಡೆಸುವ ಮೂಲಕ ಸರ್ಕಾರ ಆಯೋಗವು ವಸ್ತುನಿಷ್ಠ ಮಾಹಿತಿಯನ್ನು ಕಲೆ ಹಾಕಲು ಮುಂದಾಗಬೇಕಿದೆ. ಆದರೆ ಈ ಜಾತಿಗಣತಿ ಸರಿಯಾಗಿ ಆರಂಭವಾಗುವ ಮೊದಲ ಹಂತದಲ್ಲಿಯೆ ಹಲವು ಹತ್ತು ಸವಾಲುಗಳು ಮತ್ತು ಗಂಭೀರ ಪ್ರಶ್ನೆಗಳನ್ನು ಎದುರಿಸುವಂತಾಗಿದೆ.

ತರಾತುರಿಯಲ್ಲಿ ಇಂತಹ ಸಮೀಕ್ಷೆಗಳು ಬೇಡ ಎಂಬ ಕೂಗು ಈಗ ಎದ್ದಿದೆ. ಗೊಂದಲ ಮತ್ತು ಗೋಜಲು ಸಂಪೂರ್ಣವಾಗಿ ಬಗೆಹರಿದು ಸಮಸ್ಯೆ ತಿಳಿಯಾಗುವವರೆಗೆ ರಾಜ್ಯದಲ್ಲಿ ಇಂತಹ ಸಮೀಕ್ಷೆ ನಡೆಯುವುದೇ ಬೇಡ ಎಂದು ಕೆಲವರು ಪಟ್ಟುಹಿಡಿದಿದ್ದಾರೆ. ಈ ನಡುವೆ ಕೆಲವರು ಜಾತಿ ಸಮೀಕ್ಷೆಗೆ ತಡೆ ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರವು ಕೈಗೆತ್ತಿಕೊಂಡ ಈ ಸಮೀಕ್ಷೆಯಲ್ಲಿ ಹಲವಾರು ಗೊಂದಲಗಳಿವೆ. ಇದನ್ನು ಸರ್ಕಾರ ಸಂಪೂರ್ಣವಾಗಿ ಬಗೆಹರಿಸುವತನಕ ಸಮೀಕ್ಷೆಯನ್ನು ನಡೆಸುವುದು ಅಥವಾ ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಹೈಕೋರ್ಟ್ ಗಮನಸೆಳೆದಿರುವ ರಿಟ್ ಅರ್ಜಿದಾರರು ತಡೆಯಾಜ್ಞೆ ಕೋರಿರುವುದು ಗಮನಾರ್ಹ. ವೀರಶೈವ ಮಹಾಸಭಾ ಮತ್ತು ಇತರೆ ಜಾತಿ ಸಮುದಾಯಗಳು ಹೈಕೋರ್ಟ್ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದು ಇದಿನ್ನೂ ಕೋರ್ಟ್ ವಿಚಾರಣೆಯ ಪ್ರಾಥಮಿಕ ಹಂತದಲ್ಲಿದೆ. ಹೈಕೋರ್ಟ್ ಹೈಕೋರ್ಟ್ ಮುಂದೆ ಪ್ರತಿಪಾದನೆಯಾಗಲಿರುವ ವಾದ ಮತ್ತು ಪ್ರತಿವಾದಗಳನ್ನು ನ್ಯಾಯಪೀಠವು ಯಾವ ಅರ್ಥದಲ್ಲಿ ಪರಿಗಣಿಸಿ ತೀರ್ಪು ನೀಡಲಿದೆ ಎಂಬುದು ಗಮನಾರ್ಹ. ಒಟ್ಟಿನಲ್ಲಿ ರಾಜ್ಯದಲ್ಲಿ ಈಗ ಜಾತಿಗಣತಿ ಮುಂದುವರಿಯಲಿದೆಯೇ ಇಲ್ಲವೇ ಇದು ಈ ಹಂತದಲ್ಲಿಯೇ ಸ್ಥಗಿತಗೊಳ್ಳಲಿದೆಯೇ ಎಂಬುದು ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಆಧಾರಿತವಾಗಿದೆ

Related Posts

Leave a Reply

Your email address will not be published. Required fields are marked *