ಬೆಳಗಾವಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್.ನರೇಶ್‌ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಳಗಾವಿಯ ಕೋಳಿಕೊಪ್ಪದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಇದರಿಂದ ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಭಕ್ತರಿಗೆ ಅನುಕೂಲ ಆಗಲಿದೆ ಎಂದಿದ್ದಾರೆ.
ಇದೇ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 2ರವರೆಗೆ ತಿರುಮಲ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ತಿರುಮಲದ ಪಾವಿತ್ರ‍್ಯತೆಯನ್ನು ಕಾಪಾಡುವುದರೊಂದಿಗೆ ಸಾಮಾನ್ಯ ಭಕ್ತರಿಗೆ ಸುಲಭ ದರ್ಶನ ಸಿಗುವಂತೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ.
ಸೆಪ್ಟೆಂಬರ್ 28ರಂದು ಭಾನುವಾರ ನಡೆಯುವ ಗರುಡ ಸೇವೆ ಭಕ್ತರ ಪ್ರಮುಖ ಆಕರ್ಷಣೆಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸಲಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಟಿಟಿಡಿಯ ಎಲ್ಲಾ ಇಲಾಖೆಗಳು ಯೋಜನೆಗಳನ್ನು ಸಿದ್ಧಪಡಿಸಿವೆ. ಭಕ್ತರಿಗೆ ತೊಂದರೆಯಾಗದಂತೆ ಉಂಟಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಲ್ಯಾಣ ಕಟ್ಟೆಗೆ ಹೆಚ್ಚುವರಿಯಾಗಿ 1,500 ಜನರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರಹ್ಮೋತ್ಸವದ ಒಂಬತ್ತು ದಿನಗಳಲ್ಲಿ ಶಿಫಾರಸು ಪತ್ರಗಳ ಮೂಲಕ ಕೊಠಡಿಗಳನ್ನು ರದ್ದುಪಡಿಸಲಾಗಿದೆ. ಈ ಅವಧಿಯಲ್ಲಿ 3,500 ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುವುದು, ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲಾಗುವುದು. ವಾಹನ ಸೇವೆಗಳನ್ನು ವೀಕ್ಷಿಸಲು ಭಕ್ತರಿಗಾಗಿ 36 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗರುಡ ಸೇವೆಯ ದಿನವನ್ನು ಹೊರತುಪಡಿಸಿ ಪ್ರತಿದಿನ 1.16 ಲಕ್ಷ ವಿಶೇಷ ದರ್ಶನ ಟಿಕೆಟ್‌ಗಳು ಮತ್ತು 25,000 ಎಸ್.ಎಸ್.ಡಿ. ಟೋಕನ್‌ಗಳನ್ನು ವಿತರಿಸಲಾಗುವುದು. ವಿಐಪಿ ದರ್ಶನವನ್ನು ಸ್ವತಃ ಹಾಜರಾಗುವ ವಿಐಪಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಕ್ತರಿಗೆ ಮಾಹಿತಿ ನೀಡಲು 20 ಸಹಾಯ ಕೇಂದ್ರಗಳನ್ನು (ಹತ್ತು ಹೆಚ್ಚುವರಿ) ತೆರೆಯಲಾಗಿದೆ. ತಿರುಮಲದಲ್ಲಿ 4,000 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ತಿರುಪತಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗಾಗಿ ಒಟ್ಟು 5,250 ಮತ್ತು 2,700 ಪಾರ್ಕಿಂಗ್ ಸ್ಥಳಗಳು ಲಭ್ಯವಿದೆ. ತಿರುಪತಿಯ ಪಾರ್ಕಿಂಗ್ ಸ್ಥಳಗಳಿಂದ ತಿರುಮಲಕ್ಕೆ ಭಕ್ತರನ್ನು ಕರೆದೊಯ್ಯಲು. ಬಸ್ಸುಗಳು ಲಭ್ಯವಿರುತ್ತವೆ. ಇತರ ದಿನಗಳಲ್ಲಿ 1,900 ಟ್ರಿಪ್‌ಗಳು ಮತ್ತು ಗರುಡ ಸೇವೆ ದಿನದಂದು 3,200 ಟ್ರಿಪ್‌ಗಳು ಇರುತ್ತವೆ. 2,000 ಟಿಟಿಡಿ ಭದ್ರತಾ ಸಿಬ್ಬಂದಿ, 4,700 ಪೊಲೀಸ್ ಸಿಬ್ಬಂದಿ, 3,500 ಶ್ರೀವಾರಿ ಸೇವಕರು ಮತ್ತು 450 ಟಿಟಿಡಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 3,000 ಸಿಸಿಟಿವಿ ಕ್ಯಾಮೆರಾಗಳನ್ನು ಕಮಾಂಡ್ ಕಂಟ್ರೋಲ್ ರೂಮ್‌ಗೆ ಸಂಪರ್ಕಿಸಲಾಗಿದೆ ಎಂದು ವಿವರಿಸಿದರು.
ಬ್ರಹ್ಮೋತ್ಸವಕ್ಕಾಗಿ 2,300 ನೈರ್ಮಲ್ಯ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ 960 ಸಿಬ್ಬಂದಿ ನಿಯೋಜಿಸಲಾಗಿದೆ. 50 ವೈದ್ಯರು ಮತ್ತು 60 ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ