ಸಾಮಾಜಿಕ ಜಾಲತಾಣ ಖಾತೆಯಲ್ಲಿ ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಹಳೆಯ ವೀಡಿಯೊವನ್ನು ಶೇರ್ ಮಾಡಿದ್ದ ಯುವತಿಯನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಣನಕುಂಟೆ ನಿವಾಸಿ ಶಹಾ ಜಹಾನ್ (36) ಬಂಧಿತ ಯುವತಿ. ಆಕೆಗೆ ಎಚ್ಚರಿಕೆ ನೀಡಿ ಜಾಮೀನಿನಡಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವೀಡಿಯೊ, ಫೋಟೋ, ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ ಶಹಾ ಜಹಾನ್ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಹಳೆಯ ಘಟನೆಯೊಂದರ ವೀಡಿಯೋವನ್ನು ‘ಬೆಂಗಳೂರಿನಲ್ಲಿ ರೌಡಿಗಳ ಪುಂಡಹಾಸ’ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದರು.
ವೀಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದರು. ವೀಡಿಯೊ ವೈರಲ್ ಆಗುತ್ತಿದ್ದಂತೆ ಶಹಾ ಜಹಾನ್‌ಳನ್ನು ಪತ್ತೆಹಚ್ಚಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ, ಪರಿಶೀಲಿಸದೆ ಹಳೆಯ ಘಟನೆಯ ವೀಡಿಯೊವನ್ನು ಬೆಂಗಳೂರಿನಲ್ಲಿ ನಡೆದಿದೆ ಎಂದು ಹಂಚಿಕೊಂಡಿರುವುದಾಗಿ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಶಹಾ ಜಹಾನ್‌ಳನ್ನು ಬಂಧಿಸಿದ್ದ ಪೊಲೀಸರು ಎಚ್ಚರಿಕೆ ನೀಡಿ ಜಾಮೀನಿನಡಿ ಬಿಡುಗಡೆಗೊಳಿಸಿದ್ದಾರೆ.
ಈ ಬಗ್ಗೆ ಶಹಾ ಜಹಾನ್ ಸ್ಪಷ್ಟನೆ ನೀಡಿದ್ದು, ‘ಮತ್ತೊಬ್ಬರು ಹಂಚಿಕೊಂಡಿದ್ದ ವೀಡಿಯೊವನ್ನು ಜನಜಾಗೃತಿಯ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡಿದ್ದೆ. ಆದರೆ ವೀಡಿಯೊ ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದಿದ್ದರೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ’ ಎಂದು ತಿಳಿಸಿದ್ದಾರೆ.