Saturday, September 20, 2025
Menu

ಸುಡಾನ್‌ನಲ್ಲಿ ಮಸೀದಿ ಮೇಲೆ ದಾಳಿ: 70ಕ್ಕೂ ಹೆಚ್ಚು ಮಂದಿ ಬಲಿ

ಸುಡಾನ್‌ನ ಉತ್ತರ ಡಾರ್ಫುರ್ ರಾಜಧಾನಿ ಎಲ್-ಫಾಶರ್‌ನ ಅಲ್-ಸಫಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಭಕ್ತರ ಮೇಲೆ ಬಾಂಬ್‌ ದಾಳಿ ನಡೆದಿದ್ದು, 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಅರೆಸೈನಿಕ ಪಡೆಗಳಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಡೆಸಿದ ದಾಳಿ ಇದಾಗಿದೆ ಎಂದು ತಿಳಿದು ಬಂದಿದೆ.  ಅವಶೇಷಗಳಡಿ ಶವಗಳು ಹೂತುಹೋದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮಸೀದಿ ಸಂಪೂರ್ಣ ವಾಗಿ ಧ್ವಂಸಗೊಂಡಿದೆ. ಆರ್‌ಎಸ್‌ಎಫ್ ಇದುವರೆಗೂ ದಾಳಿಯ ಬಗ್ಗೆ ಪ್ರತಿಕ್ರಿಯಿಸಿಲ್ಲ, ಆದರೆ ಅವರು ನಗರವನ್ನು ಕೈವಶ ಮಾಡಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಎಲ್-ಫಾಶರ್ ನಗರದಲ್ಲಿ ಮುತ್ತಿಗೆಯಿಂದಾಗಿ ಆಹಾರ, ಔಷಧಗಳ ಕೊರತೆ ಉಂಟಾಗಿದ್ದು, ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಈ ಪ್ರದೇಶದಿಂದ ಹಿಂದೆ ಸರಿದಿವೆ.

2023ರ ಏಪ್ರಿಲ್‌ನಲ್ಲಿ ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಮತ್ತು ಆರ್‌ಎಸ್‌ಎಫ್ ನಾಯಕ ಮೊಹಮದ್ ಹಮ್ದಾನ್ ದಗ್ಲೋ (ಹೆಮೆಟಿ) ನಡುವಿನ ಅಧಿಕಾರ ಹೋರಾಟದಿಂದ ಯುದ್ಧ ಆರಂಭವಾಯಿತು. ಇದು ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಿಂದ ಹಿಡಿದು ದಾರ್ಫುರ್ ವರೆಗೆ ತಲುಪಿದೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯಂತೆ, ಈ ಯುದ್ಧದಲ್ಲಿ ಕನಿಷ್ಠ 40,000 ಜನರು ಅಸು ನೀಗಿದ್ದಾರೆ ಮತ್ತು 12 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ದಾರ್ಫುರ್ ಪ್ರದೇಶದಲ್ಲಿ ಆರ್‌ಎಸ್‌ಎಫ್ ಪಡೆಗಳು ಅರಬ್ ಬುಡಕಟ್ಟುಗಳೊಂದಿಗೆ ಸೇರಿ ಆಫ್ರಿಕನ್ ಸಮುದಾಯಗಳನ್ನು ಗುರಿಯಾಗಿಸಿ ಹಿಂಸಾಚಾರ ನಡೆಸುತ್ತಿರುವುದಾಗಿ ಆರೋಪಗಳಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದಾಳಿಯ ವೀಡಿಯೊಗಳಲ್ಲಿ ಮಸೀದಿಯ ಶಿಥಿಲಾವಶೇಷಗಳು, ಚದುರಿದ ಶವಗಳು ಮತ್ತು ಗಾಯಾಳುಗಳ ರೋಧನಗಳು ದಾಖಲಾಗಿವೆ. ವಿಶ್ವಸಂಸ್ಥೆ ದಾಳಿಯನ್ನು ಖಂಡಿಸಿದ್ದು, ದಾರ್ಫುರ್‌ನಲ್ಲಿ ದೌರ್ಜನ್ಯಗಳನ್ನು ತಡೆಯಬೇಕು, ನಾಗರಿಕರ ರಕ್ಷಣೆ ಅಗತ್ಯ ಎಂದು ಹೇಳಿದೆ.

Related Posts

Leave a Reply

Your email address will not be published. Required fields are marked *