ಸಿಲಿಕಾನ್ ಸಿಟಿ, ಐಟಿ-ಬಿಟಿ ನಗರಿ, ಉದ್ಯಾನವನ ನಗರಿ, ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವ ನಗರ… ಹೀಗೆ ನಾನಾ ಬಿರುದುಗಳನ್ನು ಪಡೆದಿರುವ ಬೆಂಗಳೂರಿಗೆ ಈಗ ಗುಂಡಿ ನಗರ ಎಂಬ ಕುಖ್ಯಾತಿ ಅಂಟಿಸುವ ಪ್ರಯತ್ನಗಳು ನಡೆದಿವೆ.
ಹೌದು, ಬೆಂಗಳೂರು ಗುಂಡಿಗಳ ನಗರಿ, ಪಾಟ್ ಹೋಲ್ ಸಿಟಿ ಅಂತ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಐಟಿ ಬಿಟಿ ಕಂಪನಿ ಮಾಲೀಕರು, ಸೆಲೆಬ್ರೆಟಿಗಳು ಛೀ, ಥೂ ಅಂತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕೆಲವು ಉದ್ಯಮಿಗಳಂತೂ ಊರು ಬಿಟ್ಟು ಹೋಗ್ತೀವಿ ಅಂತ ಬೆದರಿಕೆ ಹಾಕುತ್ತಿದ್ದಾರೆ.
ಒಂದು ಕಡೆ ಸರ್ಕಾರ ಗ್ರೇಟರ್ ಬೆಂಗಳೂರು ಮಾಡಲು ಉತ್ಸಾಹ ತೋರುತ್ತಿದ್ದರೆ ಮತ್ತೊಂದೆಡೆ ಗುಂಡಿ ಬಿದ್ದ ರಸ್ತೆಯಿಂದ ಬ್ರ್ಯಾಂಡ್ ಬೆಂಗಳೂರಿನ ಘನತೆಗೆ ಧಕ್ಕೆ ಆಗುತ್ತಿದೆ. ಆದರೆ ಬೆಂಗಳೂರಿಗೆ ಈ ಸ್ಥಿತಿ ಬರಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಕಾರಣವಾ? ಅಥವಾ ಕಳಪೆ ಕಾಮಗಾರಿ ಕಾರಣವಾ? ಮಳೆರಾಯ ಕಾರಣನಾ ಅಂತ ವಿವೇಚನೆ ಮಾಡದೇ ದೂರುಗಳ ಸರಮಾಲೆಯನ್ನೇ ಹೊರಿಸುವುದು ನೋಡಿದರೆ ಬೆಂಗಳೂರಿನ ಹೆಸರನ್ನು ಕೆಡಿಸಲೆಂದೇ ಪ್ರಯತ್ನಗಳು ನಡೆಯುತ್ತಿರುವಂತೆ ಕಾಣುತ್ತಿದೆ.
ಬೆಂಗಳೂರು- ದೇಶದ ಯಾವುದೇ ನಗರಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ, ಉತ್ತಮ ವಾತಾವರಣ ಹಾಗೂ ಸೌಲಭ್ಯಗಳು ಸಿಗುವ ನಗರ. ಹಾಗಾಗಿಯೇ ಎಲ್ಲೆಲ್ಲಿಂದಲೋ ಬಂದವರು ಸಿಲಿಕಾನ್ ಸಿಟಿಯಲ್ಲಿ ನೆಲೆಯೂರುತ್ತಾರೆ. ಉದ್ಯಮ, ಅಂಗಡಿಗಳನ್ನು ಆರಂಭಿಸಿ ಇಲ್ಲಿ ನೆಲೆಯೂರುತ್ತಾರೆ. ಹಾಗಾಗಿ ಬೆಂಗಳೂರು ಈಗ ವಲಸಿಗರ ಊರಾಗಿದೆ.
ಬೆಂಗಳೂರು ರಸ್ತೆ ಹಾಳಾಗಲು ಕಾರಣವೇನು?
ಬೆಂಗಳೂರು ರಸ್ತೆ ಹಾಳಾಗಲು ಕಾರಣವೇನು ಎಂಬ ಬಗ್ಗೆ ನಾನಾ ರೀತಿ ಚರ್ಚೆಗಳು ನಡೆಯುತ್ತಿವೆ. ಆದರೆ ವಾಸ್ತವವಾಗಿ ಕಳೆದ ನಾಲ್ಕು ತಿಂಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ಕಾರಣ ಎಂಬುದು ಯಾರ ಅರಿವಿಗೂ ಬಂದಂತೆ ಕಾಣುತ್ತಿಲ್ಲ.
ಹವಾಮಾನ ಇಲಾಖೆ ಪ್ರಕಾರವೇ ಈ ಬಾರಿ ಮುಂಗಾರು ನಿರೀಕ್ಷೆಗಿಂತಲೂ ಅಧಿಕ ಮಳೆ ತಂದಿದೆ. ಜೂನ್ ನಲ್ಲಿ ಆರಂಭವಾದ ಮಳೆ ನಿಲ್ಲುವ ಸೂಚನೆಯನ್ನೇ ನೀಡುತ್ತಿಲ್ಲ. ಒಂದು ಕಡೆ ಮುಂಗಾರು ಅಬ್ಬರ ಮುಗಿಯುತ್ತಿದೆ ಎಂದು ನಿರೀಕ್ಷಿಸುವಷ್ಟರಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತದಿಂದ ಸೆಪ್ಟೆಂಬರ್ ಕೊನೆಗೆ ಬಂದರೂ ಎಡಬಿಡದೇ ಮಳೆ ಸುರಿಯುತ್ತಿದೆ.
ಕೆರೆ, ರಾಜಕಾಲುವೆ ಒತ್ತುವರಿ
ಸತತ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ನಿಜ. ವಾಹನ ಸವಾರರು ಪರದಾಡುತ್ತಿರುವುದು ನಿಜ. ಆದರೆ ಇದನ್ನು ತಪ್ಪಿಸಲು ಸಾಧ್ಯವೂ ಇಲ್ಲ. ಏಕೆಂದರೆ ಈ ದೂರು ಹೇಳುವ ನಾಗರಿಕರೇ ಕೆರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಬಿಬಿಎಂಪಿ ಸಿಬ್ಬಂದಿ ಮಳೆಗಾಲಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಚರಂಡಿಗಳಲ್ಲಿ ರಾಶಿ ರಾಶಿ ಕಸ ತುಂಬಿ ಸರಾಗವಾಗಿ ನೀರು ಹರಿಯದಂತೆ ಮಾಡಿದ್ದಾರೆ.
ಕಳಪೆ ಕಾಮಗಾರಿ
ಬೆಂಗಳೂರಿನ ಬಹುತೇಕ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿಯೇ ಇವೆ. ಹಾಗಂತ ಎಲ್ಲಾ ರಸ್ತೆಗಳು ಗುಣಮಟ್ಟದಿಂದ ಕೂಡಿವೆ ಎಂದು ಹೇಳಲು ಆಗಲ್ಲ. ನಗರದ ಕೆಲವು ಕಡೆ ಕಳಪೆ ಗುಣಮಟ್ಟದ ರಸ್ತೆಗಳು ಕೂಡ ಗುಂಡಿ ಬೀಳಲು ಕಾರಣ.
ಭಾರೀ ವಾಹನಗಳು ಹಾಗೂ ಅಡ್ಡದಿಡ್ಡಿ ವಾಹನ ಚಾಲನೆಯಿಂದ ಆದರೆ ಭಾರೀ ಮಳೆಯಿಂದ ಕಿತ್ತುಹೋಗುತ್ತಿವೆ. ಅಲ್ಲದೇ ರಸ್ತೆ ಬದಿ ಕಾಮಗಾರಿಗಳು ಪ್ರಗತಿಯಲ್ಲಿ ಇರುವುದರಿಂದ ಮಳೆ ಸುರಿದು ಆ ಮಣ್ಣು ರಸ್ತೆ ಪಾಲಾಗುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹಾಳಾಗಿ ವಾಹನ ಸಂಚಾರ ದುಸ್ಥರವಾಗಿವೆ. ಇದರಿಂದ ಅಪಘಾತಗಳು ಕೂಡ ಸಂಭವಿಸುತ್ತಿವೆ.
ವ್ಯರ್ಥ ಕಾಮಗಾರಿ
ಭಾರೀ ಮಳೆಯಿಂದಾಗಿ ಹಾನಿಗೀಡಾರಿಗುವ ರಸ್ತೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಬಿಬಿಎಂಪಿ ವತಿಯಿಂದ 5000 ಗುಂಡಿಗಳನ್ನು ಮುಚ್ಚಲಾಗಿದೆ. ದುರ್ದೈವ ಅಂದರೆ ಮತ್ತೆ ಸುರಿದ ಮಳೆಯಿಂದಾಗಿ ಈ ಗುಂಡಿ ಮುಚ್ಚುವ ಕಾರ್ಯಗಳು ವ್ಯರ್ಥವಾಗಿವೆ. ಇದರಿಂದ ಬಿಬಿಎಂಪಿ ಮಳೆ ನಿಂತರೆ ಸಾಕಪ್ಪ ಎಂದು ಹರಕೆ ಹೋರುವ ಸ್ಥಿತಿಗೆ ಬಂದಿವೆ.
ನವೆಂಬರ್ ವರೆಗೂ ಗಡುವು
ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಆದರೆ ಮಳೆ ಅಡ್ಡಿಪಡಿಸುತ್ತಿದೆ. ನವೆಂಬರ್ ಒಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು,ಮುಚ್ಚುವಂತೆ ಗುಡುವು ನೀಡಲಾಗಿದೆ. ಉದ್ಯಮಿಗಳು ಬೆಂಗಳೂರು ತೊರೆಯುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುವುದು ಸರಿಯಲ್ಲ.
– ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಶೇ.109ರಷ್ಟು ಅಧಿಕ ಮಳೆ
ಬೆಂಗಳೂರಿನಲ್ಲಿ ವಾಡಿಕೆಗಿಂತ ಶೇ.169 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ಬಾರಿ ಶೇ.109 ರಷ್ಟು ಅಧಿಕ ಮಳೆಯಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಬಾರಿ ಸೆಪ್ಟೆಂಬರ್ ಅಂತ್ಯದವರೆಗೂ ಭಾರೀ ಮಳೆಯಾಗಲಿದೆ.
– ಹವಾಮಾನ ಇಲಾಖೆ