ಕೊಪ್ಪಳದ ಮುನಿರಾಬಾದ್‌ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದು ಲಾರಿಯಲ್ಲಿದ್ದ ೩೫ ಟನ್ ಅಕ್ಕಿಯನ್ನು ಸೀಝ್ ಮಾಡಿದ್ದಾರೆ.
ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಭ್ರಷ್ಟರ ಪಾಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಎಂಬುದು ಆಗಾಗ ಸಾಬೀತಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕ್ರಮವಾಗಿ ಕದ್ದು ಮಾರಾಟ ಮಾಡಲು ಮುಂದಾದ ಲಾರಿಯನ್ನು ಕೂಡ ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿ ಪೊಲೀಸರು ಲಾರಿಯನ್ನು ತಡೆಯುತ್ತಿದ್ದಂತೆ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಕ್ಕಿ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬ ಬಗ್ಗೆ ಮುನಿರಾಬಾದ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿ ಇರುವ ಅಕ್ಕಿಯ ಲೆಕ್ಕ ಕೊಡುವಾಗ 8 ಟನ್ ಎಂದು ತೋರಿಸಿ ಪೊಲೀಸ್ ಇಲಾಖೆ ಮೋಸ ಮಾಡುವ ಪ್ರಯತ್ನ ಮಾಡಿದ್ದಾರೆ. 16 ಚಕ್ರದ ಈ ಲಾರಿಯ ಸಾಮರ್ಥ್ಯ 35 ಟನ್. ಲಾರಿ ಪೂರ್ತಿ ಲೋಡ್ ಆಗಿತ್ತಾದರೂ ಲಾರಿಯಲ್ಲಿ 8 ಟನ್ ಮಾತ್ರ ಇದೆ ಎಂದು ಪೊಲೀಸ್ ಇಲಾಖೆಗೆ ಆಹಾರ ನಿರೀಕ್ಷಕ ರವಿಚಂದ್ರ ಲೆಕ್ಕ ಕೊಟ್ಟಿದ್ದಾರೆ.
ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಲಾರಿ ಪತ್ತೆಯಾಗಿ ಮೂರು ದಿನಗಳಾದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ವಶಕ್ಕೆ ಪಡೆದ ಲಾರಿಯಲ್ಲಿದ್ದ ಅಕ್ಕಿ ಪ್ರಮಾಣ ಎಷ್ಟು, ಲಾರಿ ಚಾಲಕ, ಮಾಲೀಕ ಯಾರು, ಎಲ್ಲಿಗೆ ಸಾಗಾಟ ಮಾಡಲಾಗ್ತಿತ್ತು ಎಂಬುದನ್ನು ವರದಿ ಮಾಡಿ ಪೊಲೀಸ್ ಇಲಾಖೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಬೇಕಾಗಿದ್ದ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ನಿಷ್ಕ್ರಿಯಾಗಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಲಾರಿಯಲ್ಲಿರುವ ಅಕ್ಕಿಯ ಪ್ರಮಾಣ ಗೊತ್ತಿಲ್ಲ. 8 ಟನ್ ಅಕ್ಕಿ ಎಂದು ನಾಮಕಾವಸ್ಥೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.