Saturday, September 20, 2025
Menu

ಅಶೋಕಣ್ಣಾ ಗ್ಯಾರಂಟಿ ಯೋಜನೆ ಬದಲಿಸೋದು ನಿಮ್‌ ಹಣೆಯಲ್ಲಿ ಬರ್ದಿಲ್ಲ, 2028 ಕ್ಕೂ ನಾವೇ ಅಧಿಕಾರಕ್ಕೆ ಬರೋದು: ಡಿಕೆ ಶಿವಕುಮಾರ್‌

ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ತೆಗೆದು ಹಾಕುವುದಾಗಿ ಯಾರೋ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದಾರಂತೆ. ಮಿಸ್ಟರ್ ಅಶೋಕ್, ಅಶ್ವಥ ನಾರಾಯಣ, ಜನತಾ ದಳದ ನಾಯಕರೇ ನಿಮ್ಮ ಯಾರ ಹಣೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಬರೆದಿಲ್ಲ. ಅಶೋಕಣ್ಣಾ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಲು 2028 ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಈ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನೀವು ಇನ್ನು ಅಧಿಕಾರ ಮರೆತುಬಿಡಿ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದರು.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು  ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಆಧಾರ್ ಕಾರ್ಡ್, ಪಿಂಚಣಿ, ಉಳುವವನೆ ಭೂಮಿಯ ಒಡೆಯ ಸೇರಿದಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಒಂದೇ ಒಂದು ಯೋಜನೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಆಗಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮರು ಜನ್ಮವೆತ್ತಿ ಬಂದರೂ ದಳ ಹಾಗೂ ಬಿಜೆಪಿಯವರು ನಿಲ್ಲಿಸಲು, ಬದಲಾವಣೆ ಮಾಡಲು ಆಗುವುದಿಲ್ಲ. ಈ ಮಾತನ್ನು ದೇವರಾಜ ಅರಸು ಅವರ ಭಾವಚಿತ್ರದ ಮುಂದೆ ಹೇಳುತ್ತಿದ್ದೇನೆ. ನಮ್ಮನ್ನು ಟೀಕೆ ಮಾಡಿದ ವಿರೋಧ ಪಕ್ಷಗಳು ಈಗ ನಮ್ಮನ್ನೇ ಅನುಕರಣೆ ಮಾಡುತ್ತಿವೆ. ಹರಿಯಾಣ, ಮಹಾರಾಷ್ಟ್ರ, ಗೋವಾ ಸೇರಿ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿವೆ ಎಂದರು.

“ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ.”  “ನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದೇನೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಜಾತಿ ಮೇಲೆ ನಂಬಿಕೆಯಿಟ್ಟಿರುವವನಲ್ಲ. ನೀತಿ ಮೇಲೆ ನಂಬಿಕೆಯಿಟ್ಟಿರುವವನು. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆ” ಎಂದರು.

“ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಬೇಕು ಎಂದು ಜಿಲ್ಲೆಯ ಪ್ರತಿಧಿಗಳ ಸಭೆ ಕರೆದು ಈಗಾಗಲೇ ತೀರ್ಮಾನ ಮಾಡಲಾಗಿದೆ. “ಬಗರ್ ಹುಕುಂ ಸೇರಿದಂತೆ, ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾತಿಗೆ ಬಾಕಿ ಇರುವ ಭೂಮಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.”  “ಕನಕಪುರದಲ್ಲಿ  100 ಎಕರೆ ಪ್ರದೇಶದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಹೆಸರಿಗೆ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ.  ಸುಮಾರು 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿದ್ದೇನೆ. ಈಗ ಡಿಕೆಸುರೇಶ್ ಅವರಿಗೆ ಈ ಸಮಿತಿಯ ಜವಾಬ್ದಾರಿ ನೀಡಲಾಗಿದೆ.” ಎಂದರು.

“ಕುಮಾರಸ್ವಾಮಿ  ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು, ಬಡವರಿಗೆ ನಿವೇಶನ ಹಂಚಲು ಆಗಲಿಲ್ಲ. ಹೀಗಿದ್ದ ಮೇಲೆ ರಾಜಕಾರಣ ಏಕೆ ಮಾಡಬೇಕು? ರಾಜಕೀಯ ಮಾಡುವ ಅವಕಾಶವನ್ನೇ ಜನತಾದಳದವರು ಕಳೆದುಕೊಂಡಿದ್ದಾರೆ” “ಮಾಜಿ ಸಚಿವ ಅಶ್ವಥ ನಾರಾಯಣ  ಜಿಲ್ಲೆಗೆ ಬಂದಿದ್ದರು. ಯಾರಾದರೂ ಗಂಡಸರು ಇದ್ದೀರಾ? ಎಂದು ಪ್ರಶ್ನಿಸಿದ್ದರು. ಅವರಿಗೂ  ಒಂದೇ ಒಂದು ನಿವೇಶನ ಹಂಚಲು ಆಗಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಒಬ್ಬರಿಗೂ ಸಹಾಯ ಮಾಡಲು ಆಗಲಿಲ್ಲ . ʼಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನನ್ನೂ ಮಾಡದವರು ಇನ್ನೆಂದೂ ಕೆಲಸ ಮಾಡಲೂ ಸಾಧ್ಯವಿಲ್ಲ” ಎಂದು ಶಿವಕುಮಾರ್‌ ಕುಟುಕಿದರು.

ಜಾತಿ ಹೆಸರು ಸರಿಯಾಗಿ ನಮೂದಿಸಿ

“ಒಬಿಸಿಗಳ ಏಳಿಗೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ನಿಮ್ಮ ಜಾತಿಯನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬರೆಸಬೇಕು. ನೀವು ಸರಿಯಾಗಿ ನಿಮ್ಮ ಜಾತಿ ನಮೂದಿಸದಿದ್ದರೆ ಇಡೀ ಸಮಾಜಕ್ಕೆ ಅನ್ಯಾಯ ಎಸಗಿದಂತೆ, ಆತ್ಮಸಾಕ್ಷಿಗೆ ಮೋಸ ಮಾಡಿದಂತೆ” ಎಂದರು.

“ಜನರ ಬದುಕು ಬದಲಾವಣೆ ಮಾಡುವಂತಹ ಕಾರ್ಯಕ್ರಮಗಳನ್ನು ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ನೀಡಿದ್ದರು. ಬಡವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದವರು ದೇವರಾಜ ಅರಸು ಅವರು. ಸಾಮಾಜಿಕ ನ್ಯಾಯ ನೀಡಿದವರು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತಂದರು. ವೃದ್ದಾಪ್ಯ ವೇತನ ನೀಡುವುದನ್ನು ರಾಜ್ಯದಲ್ಲಿ ಜಾರಿಗೆ ತಂದರು. ವಿಧವಾ ಪಿಂಚಣಿ, ಬಡವರಿಗೆ ನಿವೇಶನಗಳನ್ನು ನೀಡಲಾಯಿತು.  ಬಗರ್ ಹುಕುಂ ಸಾಗುವಳಿ ಭೂಮಿ ನೀಡುವ ಕೆಲಸವೂ ಆಯಿತು. ರಾಮನಗರದಲ್ಲಿ ಶಾಸಕರಾಗಿದ್ದ ಸಿ.ಎಂ. ಲಿಂಗಪ್ಪ ಅವರು ನೂರಾರು ಜನರಿಗೆ ಭೂಮಿ ಹಂಚಿಕೆ ಮಾಡಿದರು. ಈ ಜಿಲ್ಲೆಯವರಾದ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಿಸಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ” ಎಂದು ಡಿಸಿಎಂ ಹೇಳಿದರು.

“ದೇವರಾಜ ಅರಸು ಅವರು ರಾಜಮನೆತನಕ್ಕೆ ಸೇರಿದವರು. ಆದರೆ ಬಡವರ ಪರವಾಗಿ ಕೆಲಸ ಮಾಡಿದರು. ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯ ಎನ್ನದೇ ಸಕಲ ಹಿಂದುಳಿದ ಸಮುದಾಯಗಳ ಪರವಾಗಿ ನಿಂತು ಕೆಲಸ ಮಾಡಿದವರು ಅರಸು ಅವರು.” ವಿದ್ಯಾರ್ಥಿ ನಾಯಕನಾಗಿದ್ದಾಗ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದ ವ್ಯಕ್ತಿ ನಾನು. ಕಲ್ಲಿನ ಕ್ವಾರಿ ಕೆಲಸ ನೋಡಲು ಜಿಲ್ಲೆಗೆ ಬಂದಿದ್ದೆ. ಆಗ ನನಗೆ ದೂರವಾಣಿ ಕರೆ ಬಂತು. ತಕ್ಷಣ ಬೆಂಗಳೂರಿಗೆ ಹೊರಡಲು ಹೇಳಲಾಯಿತು. ಆಗ ನನಗೆ ತಿಳಿಯಿತು ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ.  ಒಬ್ಬ ಹಿಂದುಳಿದ ವರ್ಗದ ನಾಯಕ ಬಂಗಾರಪ್ಪ ಅವರು ಈ ಶಿವಕುಮಾರ್ ನನ್ನು ಬೆಳೆಸಿದರು ಎಂದರು.

Related Posts

Leave a Reply

Your email address will not be published. Required fields are marked *