ಒಂದೇ ರೀತಿಯ ಮೊಟ್ಟೆ ಬುರ್ಜಿ ತಿಂದು ಬೇಜಾರಾಗಿದ್ದರೆ, ಸ್ವಲ್ಪ ಡಿಫರೆಂಟ್ ಆಗಿ ಮಾಡಿಕೊಂಡು ತಿನ್ನಿ, ಮಕ್ಕಳಿಗೂ ಇಷ್ಟವಾಗಬಹುದು. ಈ ಮೊಟ್ಟೆ ಬುರ್ಜಿ ಮಾಡಿಕೊಳ್ಳಲು ನಾಲ್ಕು ಮೊಟ್ಟೆ, ಎರಡು ಟೊಮೆಟೊ, ಎರಡು ಈರುಳ್ಳಿ, ನಾಲ್ಕೈದು ಎಸಳು ಬೆಳ್ಳುಳ್ಳಿ, ನಾಲ್ಕು ಮೆಣಸಿನಕಾಯಿ, ಒಂದು ಟೀ ಸ್ಪೂನ್ ಚಿಕನ್ ಮಸಾಲೆ, ಚಿಟಿಕೆ ಅರಶಿಣ, ಸಣ್ಣ ತುಂಡು ಶುಂಠಿ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಎಣ್ಣೆ, ಕರಿಬೇವು ಎಲೆ ರೆಡಿ ಇಟ್ಟುಕೊಳ್ಳಿ.
ಮೊದಲು ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಕರಿಬೇವು ಎಲೆ ಹಾಕಿ ಬಳಿಕ ಈರುಳ್ಳಿ, ಟೊಮೆಟೊ ಸೇರಿಸಿ ಬಾಡಿಸಿ, ನಂತರ ಉಪು ಹಾಕಿ ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿಕೊಂಡ ಮೇಲೆ ಜಜ್ಜಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಮಿಕ್ಸ್ ಮಾಡಿ. ಅದಾದ ಬಳಿಕ ಚಿಕನ್ ಮಸಾಲ ಸೇರಿಸಿ.
ನಂತರ ಮೊಟ್ಟೆಗಳನ್ನು ಒಡೆದು ಮಿಶ್ರಣಕ್ಕೆ ಹಾಕಿ ಅರಶಿಣ ಸೇರಿಸಿ. ಸಣ್ಣ ಉರಿಯಲ್ಲೇ ಮಿಕ್ಸ್ ಮಾಡುತ್ತಿರಿ, ಉಪ್ಪು ಬೇಕಿದದ್ದಲ್ಲಿ ಸೇರಿಸಿ. ಬುರ್ಜಿ ಉದುರು ಉದುರಾಗಿ ಕಾಣುವ ಹದಕ್ಕೆ ಬಂದ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ ಐದು ನಿಮಿಷ ಮುಚ್ಚಿಡಿ. ಈ ಬುರ್ಜಿ ಅನ್ನದ ಜೊತೆ, ಚಪಾತಿ, ದೋಸೆ ಜೊತೆಗೆ ತಿನ್ನಲು ಚೆನ್ನಾಗಿ ರುತ್ತದೆ.