ಪಾಲಿಕೆ ಅಥವಾ ಇಲಾಖೆ ಅನುಮೋದಿಸುವ ಟೆಂಡರ್ ಮತ್ತು ಗುತ್ತಿಗೆ ಕರಾರಿನ ಅನುಸಾರ ರಸ್ತೆ ಕಾಮಗಾರಿ ನಿಖರವಾಗಿ ಪೂರ್ಣಗೊಂಡರೆ ರಸ್ತೆಯಾದ ಮೂರೇ ತಿಂಗಳೊಳಗೆ ಅದೇ ರಸ್ತೆಯಲ್ಲಿ ಯಾಕೆ ಗುಂಡಿ – ಕಂದಕ ಏಕೆ ನಿರ್ಮಾಣವಾಗುತ್ತದೆ
ಭ್ರಷ್ಟ ಕಂಟ್ರಾಕ್ಟರುಗಳನ್ನು ಬಗ್ಗುಬಡಿಯದೇ ರಸ್ತೆ ಗುಂಡಿ ಸಮಸ್ಯೆ ಬಗೆಹರಿಯದು.
ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಅಗೆತಗಳ ರಾಡಿ ಇಂದಿನ ಸಮಸ್ಯೆ ಅಲ್ಲ ! ಇದಕ್ಕೆ ಬಹುದೊಡ್ಡ ಕುಖ್ಯಾತಿ ಇದೆ ! ಕರ್ನಾಟಕದ ರಾಜಧಾನಿ ಎಂದರೆ ಕೆಲವರಿಗೆ ಟೀಕ್ ಇಟ್ ಫಾರ್ ಗ್ರಾಂಟೆಡ್.. ! ಮೊಟ್ಟ ಮೊದಲನೆಯದಾಗಿ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಮತ್ತು ಕರೆಂಟು ನೀರು, ಸೇತುವೆ ಶಾಲೆ ಮತ್ತು ಸರ್ಕಾರಿ ಗುತ್ತಿಗೆ ಪಡೆಯುವ ಗುತ್ತಿಗೆದಾರರಿಗೆ ಸರ್ಕಾರ ಮತ್ತು ನೆಲದ ಕಾನೂನುಗಳೆಂದರೆ ಅದು ಅವರ ಪಾಲಿಗೆ ಕಾಲಕಸಕ್ಕೆ ಸಮಾನ ! ಯಾರನ್ನು ಹೇಗೆ ಬೇಕಾದರೂ ಮ್ಯಾನೇಜ್ ಮಾಡಬಹುದು ಎಂಬ ಭ್ರಷ್ಟ ಮನೋಧೋರಣೆ ಮತ್ತು ದುರಂಹಕಾರಿ ಪ್ರವೃತ್ತಿ !
ಹಾಳಾದ ರಸ್ತೆ ಮತ್ತು ಆಳೆತ್ತರದ ರಸ್ತೆ ಗುಂಡಿಗಳಿಗೆ ಯಾರು ಹೊಣೆ ಎಂಬುದು ಜಗತ್‌ಜಾಹೀರಿನ ವಿಷಯ. ಇದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ಇಂತಹ ಕೆಟ್ಟ ಪರಿಸ್ತಿತಿಗೆ ಯಾವುದು ಹೊಣೆ ? ಯಾಕೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ? ಇದರ ನಿವಾರಣೆಗೆ ಬೇಕಿರುವುದು ಏನು ? ಎಂಬುದರ ಬಗ್ಗೆ ಸರ್ಕಾರ ಮತ್ತು ಜಿಬಿಎ ಪಿತೃಗಳು ಇಂದು ಗಂಭೀರವಾಗಿ ಆಲೋಚಿಸಬೇಕಿದೆ. ಪಾಲಿಕೆ ಅಥವಾ ಇಲಾಖೆ ಅನುಮೋದಿಸುವ ಟೆಂಡರ್ ಮತ್ತು ಗುತ್ತಿಗೆ ಕರಾರಿನ ಅನುಸಾರ ರಸ್ತೆ ಕಾಮಗಾರಿ ನಿಖರವಾಗಿ ಪೂರ್ಣಗೊಂಡರೆ ಯಾಕೆ ರಸ್ತೆ ರಿಪೇರಿಯಾದ ಮೂರೇ ತಿಂಗಳಿಗೆ ಅದೇ ರಸ್ತೆಯಲ್ಲಿ ಗುಂಡಿ ಬೀಳುತ್ತೆ ? ಗುಣಮಟ್ಟವಿಲ್ಲದ ರಸ್ತೆ ಮತ್ತು ಚರಂಡಿ ಸಿವಿಲ್ ಕಾಮಗಾರಿಗಳು ಇಡೀ ಬೆಂಗಳೂರುನ್ನು ಇಂದು ಆವರಿಸಿಕೊಂಡಿದೆಯಲ್ಲ ? ಇದು ಮಹಾ ಭ್ರಷ್ಟ ಸಿವಿಲ್ ಗುತ್ತಿಗೆದಾರರ ಕೊಡುಗೆ ಅಲ್ಲವೇ ? ಇಂತಹ ಗುತ್ತಿಗೆದಾರರ ಮಹಾ ಸಂತಾನವನ್ನು ಬೆಂಗಳೂರಿನಲ್ಲಿ ಪೋಷಿಸಿ ಅವರಿಗೆ ಬಹುದೊಡ್ಡ ರಾಜಾಶ್ರಯ ನೀಡಿದವರು ಯಾರು ? ಇದರಲ್ಲಿ ಹಿಂದಿನ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳ ಮಹಾ ಕೊಡುಗೆಯೂ ಇದೆ ಎಂಬುದಿಲ್ಲಿ ಮುಖ್ಯ.
ಮಹಾ ದುರಂತ ಎಂದರೆ ನಾವಿಂದು ಬೆಂಗಳೂರಿನ ಕೆಟ್ಟ ರಸ್ತೆಗಳ ಬಗ್ಗೆ ಬಾಯಿ ತೆರೆದು ಮಾತಾನಾಡುವುದು ಟೆಕ್ಕಿ ಸಂಸ್ಥೆಗಳ ರಾಜಗುರುಗಳಂತಿರುವ ಮೋಹನದಾಸ ಪೈ ಮತ್ತು ಕಿರಣ್ ಮಜುಂದಾರ್ ಷಾ ಅವರು ಮೀಡಿಯಗಳಲ್ಲಿ ಬೊಬ್ಬಿರಿದ ಬಳಿಕ! ಇಲ್ಲಿ ಸ್ಥಾಪನೆಯಾದ ಐಟಿ ಕಂಪನಿಗಳ ನಿತ್ಯ ಕರ್ಮಗಳಿಗೆ ಕೊಂಚ ಲೋಪವಾದರೂ ಅದು ಮೀಡಿಯಾದಲ್ಲಿ ನ್ಯಾಷ ನಲ್ ಹೆಡ್‌ಲೈನ್ ಸುದ್ದಿಯಾಗುತ್ತೆ . ಆದರೆ ಅದೇ ಓರ್ವ ಬೆಂಗಳೂರಿಗನು ಪ್ರತಿ ನಿತ್ಯ ಇಂತಹ ಯುಮರೂಪಿ ರಸ್ತೆಗಳ ಮೇಲೆ ಸಂಚರಿಸಿ ಹೈರಾಣ ಆದರೂ ಸರ್ಕಾರಗಳು ತಲೆ ಕೆಡಿಸಿಕೊಳ್ಳದು. ಇದಕ್ಕೆ ಬೆಂಗಳೂರಿನ ಉಸ್ತುವಾರಿಗಳಾದ ಉಪಮುಖ್ಯಮಂತ್ರಿಗಳು ಈಗ ಕೊನೆ ಹಾಡುವ ಕಾಲ ಸಮೀಪಿಸಿದೆ. ಕಳಪೆ ಕಾಮಗಾರಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ನುಂಗಿ ನೀರಿಳಿಸಿದ ಎಲ್ಲ ಕಂಟ್ರಾಕ್ಟರುಗಳನ್ನು ಸದೆ ಬಡಿದು ಗುಣಮಟ್ಟದ ಸಿವಿಲ್ ಕಾಮಗಾರಿಗಳಿಗೆ ಡಿಕೆಶಿ ಅವರೇ ಖುದ್ದು ಖಡಕ್ ಕಾರ್ಯ ನಿರ್ವಹಣೆ ಮಾಡುವ ತುರ್ತು ಸನ್ನಿವೇಶ ನಿರ್ಮಾಣವಾಗಿದೆ.