ಹಾಸನ: ರಷ್ ಆಗಿರುವ ಬಸ್ ನಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳಿಯರನ್ನುಯ ಹಾಸನ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಚಿತ್ತೂರು ಜಿಲ್ಲೆ ಕುಪ್ಪಂನ ಗ್ರಾಮದ ಶಶಿ (35), ಮಾಧವಿ (40), ಅಕಿಲ (30), ವಿದ್ಯಾ (29) ಬಂಧಿತರು. ಆರೋಪಿಗಳ ಬಳಿ ಇದ್ದ 6.38 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಳಿ ಮಹಿಳೆಯೊಬ್ಬರ ಸರ ಕಳ್ಳತನ ಆಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹೊಳೆನರಸೀಪುರ ನಗರ ಠಾಣೆ ಪೋಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಲು ಬರುವ ಗಡಿಬಿಡಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಚಿನ್ನದ ಸರ, ಮಾಂಗಲ್ಯ ಸರ, ನೆಕ್ಲೇಸ್ ಎಗರಿಸಿ ಕಳ್ಳಿಯರು ಪರಾರಿಯಾಗುತ್ತಿದ್ದರು.
ಕಳ್ಳಿಯರಿಗಾಗಿ ಬಲೆ ಬೀಸಿದ ಇನ್ ಸ್ಪೆಕ್ಟರ್ ಪ್ರದೀಪ್ ಪಿಎಸ್ ಐ ಅಭಿಜಿತ್ ನೇತೃತ್ವದ ಟೀಂ ಕಾರ್ಯಾಚರಣೆ ನಡೆಸಿ ಕಳ್ಳಿಯರನ್ನು ಬಂಧಿಸಿ 6.38 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಲ್ಲಿ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.
ಒಂದೇ ಗ್ರಾಮದವರಾದ ಈ ಕಳ್ಳಿಯರು ಬೇರೆ ಬೇರೆ ಉದ್ಯೋಗಳಲ್ಲಿ ತೊಡಗಿಕೊಂಡಿದ್ದು, ಶಶಿ ಎಂಬಾಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಬೇರೆ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದರು.
ಬೇರೆ ಬೇರೆ ಊರುಗಳಿಗೆ ಆಗಾಗ ಹೋಗಿ ಗುಂಪಿನಲ್ಲಿ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದರು. ಶಶಿ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಕೇಸ್ ಕೂಡ ದಾಖಲಾಗಿದೆ.