ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಕಳೆದೊಂದು ತಿಂಗಳಲ್ಲಿ ವಿಚಿತ್ರ ರೋಗದಿಂದ 15 ಜಾನುವಾರುಗಳು ಮೃತಪಟ್ಟಿವೆ.
ದೇಹದ ಮೇಲೆಲ್ಲ ಗುಳ್ಳೆ ಎದ್ದು ರಕ್ತ ಸುರಿದು ಜಾನುವಾರುಗಳು ಸಾಯುತ್ತಿರುವುದು ಪಶು ಸಾಕಣೆದಾರರಲ್ಲಿ ಆತಂಕ ಸೃಷ್ಟಿಸಿದೆ. ವಿಚಿತ್ರ ಗುಳ್ಳೆ ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ವ್ಯಾಕ್ಸಿನೇಶನ್ ಹಾಕಿಸಿದ್ದರೂ ಆ ಜಾನಯವಾರುಗಳೂ ಸಾಯುತ್ತಿರುವುದರಿಂದ ಮಾಲೀಕರು ಆತಂಕಗೊಂಡಿದ್ದಾರೆ.
ಜಾನುವಾರುಗಳ ಈ ರೀತಿಯ ಸಾವಿನಿಂದ ಕಂಗೆಟ್ಟ ಕುಟುಂಬಗಳು ಗ್ರಾಮವನ್ನೇ ತೊರೆದಿವೆ. ಹೈನುಗಾರಿಕೆ ನಂಬಿದ್ದ ರೈತರಿರ ಜೀವನಕ್ಕೆ ಬಹಳ ತೊಂದರೆಯಾಗಿದೆ. ಒಂದು ಹಸು ಕೊಳ್ಳಲು 60 ಸಾವಿರ ಹಣದ ಅವಶ್ಯಕತೆ ಇರುವಾಗ ಒಂದು ಹಸು ಮೃತ ಪಟ್ಟರೆ ಪಶು ಸಂಗೋಪನಾ ಇಲಾಖೆ 15 ಸಾವಿರ ಪರಿಹಾರ ನೀಡುತ್ತಿದೆ.
ಪರಿಹಾರದ ಹಣ ಬರಬೇಕಾದರೆ 5 ಸಾವಿರ ಲಂಚ ಕೊಡಲೇಬೇಕಾಗಿದೆ ಎಂದು ಸಾರ್ವಜನಿಕರು ಅಸಹನೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಹಾಗೂ ರೋಗಕ್ಕೆ ಮದ್ದು ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಜಾನುವಾರುಗಳ ಸಾವಿನಿಂದ ಕಂಗೆಟ್ಟ ಕುಟುಂಬಗಳು ಮತ್ತೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ನೀಡುವಂತೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಮತ್ತು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರನ್ನಜು ಆಗ್ರಹಿಸಿದ್ದಾರೆ.