ಹುಣಸೂರು ತಾಲೂಕು ಲಕ್ಷ್ಮಣ ತೀರ್ಥ ನದಿ ತೂಗುಸೇತುವೆ ಬಳಿ ನೀರಿಗೆ ಜಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ಪುತ್ರಿ ದೀಪಿಕಾ ಆತ್ಮಹತ್ಯೆಗೆ ಮಾಡಿಕೊಂಡ ಯುವತಿ.
ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿ ನನ್ನ ಆತ್ಮಹತ್ಯೆಗೆ ನಾನೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನದಲ್ಲಿ ಸ್ನೇಹಿತೆಯರ ಜೊತೆ ಪಾರ್ಕ್‌ನಲ್ಲಿದ್ದ ವೀಡಿಯೊವನ್ನು ಇನ್ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಪವನ್.ಕೆ (21) ಆತ್ಮಹತ್ಯೆ ಮಾಡಿಕೊಂಡಾತ.
ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಪವನ್ ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ. ಈ ವೇಳೆ ಒಬ್ಬಾಕೆಯ ಕೈ ಹಿಡಿದು ಪವನ್ ಆತ್ಮೀಯವಾಗಿ ಮಾತನಾಡುತ್ತಿದ್ದ. ಈ ದೃಶ್ಯವನ್ನು ಅಪರಿಚಿತ ಯುವತಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಇನ್ಸ್ಟಾಗ್ರಾಂ ಖಾತೆಯಲ್ಲಿ ಟೀಕೆ ಜೊತೆಗೆ ವ್ಯಂಗ್ಯ ಸಂಭಾಷಣೆಯೊಂದಿಗೆ ಪೋಸ್ಟ್ ಮಾಡಿದ್ದಳು.
ಈ ವೀಡಿಯೊವನ್ನು ಪವನ್ ಸಹಪಾಠಿಗಳು ಸೇರಿದಂತೆ ಅನೇಕರು ವೀಕ್ಷಣೆ ಮಾಡಿದ್ದರು. ಇದರಿಂದ ತನ್ನೊಂದಿಗಿದ್ದ ಯುವತಿಯರಿಗೆ ಏನಾದರೂ ತೊಂದರೆ ಆಗಲಿದೆ ಎಂದು ಭಾವಿಸಿ ಇನ್ಸ್ಟಾದಿಂದ ವೀಡಿಯೊ ಡಿಲೀಟ್ ಮಾಡಿಸಲು ಪವನ್ ಸಾಕಷ್ಟು ಪ್ರಯತ್ನ ಪಟ್ಟಿದ್ದ. ಸಾಧ್ಯವಾಗದೆ ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋಗಿ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪವನ್ ಸಾವಿಗೆ ಕಾರಣಳಾದ ಅಪರಿಚಿತ ಯುವತಿಯನ್ನು ಬಂಧಿಸುವಂತೆ ಪವನ್ ಕುಟುಂಬಸ್ಥರು ಆಗ್ರಹಿಸಿಸಿದ್ದಾರೆ.ಗೊರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.