ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಿ. ಮಾನವ- ಜಾನವಾರು ಜೀವ ಹಾನಿಗಳಿಗೆ ಶೇ100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲ್ಬುರ್ಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿ ಕುರಿತಂತೆ ಮಾಹಿತಿ ಪಡೆದು, ಜಂಟಿ ಸಮೀಕ್ಷೆ ನಡೆದಿರುವ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಬಳಿಕ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಜಯ್ ಸಿಂಗ್ ಅವರು ಪರಿಸ್ಥಿತಿಯನ್ನು ವಿವರಿಸಿ, “ತಾವು ಸಿಎಂ ಆಗಿರುವಾಗ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ17 ರಷ್ಟು ಮಳೆ ಹೆಚ್ಚಾಗಿದೆ. 37 ಮಾನವ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು ಎಲ್ಲಾ ಪರಿಹಾರ ನೀಡಲಾಗಿದೆ. ಜಾನವಾರು ಪ್ರಾಣ ಹಾನಿ 175 ಪ್ರಕರಣ ವರದಿಯಾಗಿದ್ದು ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಳಲ್ಲೂ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬೀದರ್, ಕಲ್ಬುರ್ಗಿ, ಕೊಪ್ಪಳ, ಯಾದಗೀರ್ ಜಿಲ್ಕೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಿರಂತರ ಜೋರು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗಧಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ಬಳಿಕ ಹೆಚ್ಚುವರಿ ಎಂಟತ್ತು ದಿನಗಳು ಅಗತ್ಯ ಬೀಳಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಬೆಳೆ ಹಾನಿಯನ್ನು ದ್ರೋಣ್ ಕ್ಯಾಮರಾ ಮೂಲಕ ಸೆರೆ ಹಿಡಿದು ಮಾಡಿರುವ ವೀಡಿಯೊವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತೋರಿಸಿ ವಿವರಿಸಿದರು. ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ಸಭೆಯ ಬಳಿಕ ಮುಖ್ಯಮಂತ್ರಿಗಳು ಅಫ್ಜಲಪುರ ವಿಧಾನಸಭಾ ಕ್ಷೇತ್ರದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.