ಕೇಂದ್ರ ಸರ್ಕಾರ ಪಡಿತರ ಕಾರ್ಡ್‌ಗಳ ಪರಿಷ್ಕರಣೆ ಮಾಡಿ ಏಳು ಲಕ್ಷ ಕಾರ್ಡ್‌ಗಳು ಬಿಪಿಎಲ್ ಗೆ ಅರ್ಹವಲ್ಲ ಎಂದು ತೀರ್ಮಾನಿಸಿದೆ. ನಾವು ಕೂಡ ಅದನ್ನು ಪರಿಷ್ಕರಣೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಬಿಪಿಎಲ್‌ನಲ್ಲಿ ಅನರ್ಹರಿದ್ದರೆ ಅವರನ್ನು ಎಪಿಎಲ್‌ಗೆ ಸೇರಿಸುತ್ತೇವೆ, ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಒಂದೆರಡು ಅರ್ಹ ಕಾರ್ಡ್ ಬಿಪಿಎಲ್ ನಿಂದ ಎಪಿಎಲ್‌ಗೆ ಹೋದ ಸಂದರ್ಭದಲ್ಲಿ ಅವರು ತಕ್ಷಣ ಅರ್ಜಿ ಹಾಕಿದರೆ ಅವರನ್ನು ಬಿಪಿಎಲ್ ಗೆ ವಾಪಸ್ ತಂದು 24 ಗಂಟೆಯಲ್ಲಿ ಅವರಿಗೆ ಪಡಿತರ ಸಿಗುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್‌ನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ ಇದೆ, 70% ನಷ್ಟು ಬಿಪಿಎಲ್ ಕಾರ್ಡ್ ರಾಜ್ಯದಲ್ಲಿ ಇದೆ. ಇದರ ಪರಿಷ್ಕರಣೆ ಅನಿವಾರ್ಯ, ಯಾರಿಗೂ ತೊಂದರೆ ಆಗುವುದಿಲ್ಲ. ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ನಾವು ಫಾಲೋ ಮಾಡುತ್ತೇವೆ. ಯಾವ ಫಲಾನುಭವಿಗಳು ಆತಂಕ ಪಡಬೇಕಾಗಿಲ್ಲ. ಅರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತೊಂದರೆ ಆಗುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಅನರ್ಹರ ಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡ್ ಇರುವ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ , ಅನರ್ಹರನ್ನು ಬಿಪಿಎಲ್ ಕಾರ್ಡ್ ನ ಸೌಲಭ್ಯದಿಂದ ತೆಗೆದುಹಾಕುವಂತೆ ಹಾಗೂ ಅರ್ಹರಿಗೆ ಈ ಸೌಲಭ್ಯವನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಅನ್ನಭಾಗ್ಯದ ಅಕ್ಕಿ ಹೊರದೇಶಕ್ಕೆ ರಫ್ತಾಗುತ್ತಿರುವ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತಿದ್ದು, ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.