ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೊಂದು ಅಪರೂಪದ ಘಟನೆ ನಡೆದಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಇದು ಪಶು ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಕರಡಿ ಕಾಲು ಜೋಡಣೆಯ ಮೈಲಿಗಲ್ಲು ಎಂದರೆ ತಪ್ಪಾಗದು.
ಕಾಲು ಕಳೆದುಕೊಂಡಿದ್ದ ವಸಿಕರನ್ ಎಂಬ ಕರಡಿಗೆ ತಜ್ಞರು ಮೂರು ದಿನ ಕಾಲು ಜೋಡಣೆಯ ಕಾರ್ಯ ನಡೆಸಿ ಚಿಕಿತ್ಸೆ ಮಾಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ವೈಲ್ಡ್ ಲೈಫ್ sos ಸಂಸ್ಥೆ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ ಕಾರ್ಯ ಮಾಡಿದೆ.
2019 ರಲ್ಲಿ ಬಳ್ಳಾರಿ ಅರಣ್ಯ ಪ್ರದೇಶದಿಂದ ಈ ಕರಡಿಯನ್ನು ರಕ್ಷಣೆ ಮಾಡಲಾಗಿತ್ತು. ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸಿದ್ದ ವಸಿಕರನ್ ಕರಡಿಯ ಹಿಂಬದಿ ಎಡಗಾಲು ಮುರಿದು ನರಳಾಡುತ್ತಿತ್ತು.
ಅಲ್ಲಿಂದ ಬನ್ನೇರುಘಟ್ಟ ಕರಡಿ ಆರೈಕೆ ಕೇಂದ್ರಕ್ಕೆ ಕರೆತರಲಾಗಿತ್ತು. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು.
ಮೂರು ಕಾಲಿನಿಂದ ನಡೆಯಲು ಅಭ್ಯಾಸ ಮಾಡಿಕೊಂಡಿದ್ದ ಕರಡಿಯನ್ನು ಪ್ರಾಣಿಗಳ ಜಾಗತಿಕ ಮೂಳೆ ತಜ್ಞರಾದ ಅಮೆರಿಕದ ಡೆರಿಕ್ ಕಂಪನಾ ಗಮನಿಸಿದ್ದರು. ಅವರು ಕರಡಿ ವಸಿಕರನ್‌ಗೆ ಮಣ್ಣು ತೋಡಲು, ಮರ ಹತ್ತಲು, ಮೇವು ಸಂಗ್ರಹ ಅನುಕೂಲವಾಗಲೆಂದು ಕೃತಕ ಕಾಲನ್ನು ಸಿದ್ಧಗೊಳಿಸಿದ್ದು, ಈಗ ಕಾಲು ಜೋಡಣೆಯ ಬಳಿಕ ಕರಡಿ ಆರಾಮದಾಯಕವಾಗಿ ಓಡಾಡುತ್ತಿದೆ.