ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ – 2025 ರ ಪ್ರಯುಕ್ತ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ತ ನಾಗರಿಕರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನದ ಶುಭಾಶಯಗಳನ್ನು ಕೋರಿದರು.
1947ರ ಆಗಸ್ಟ್ 15ರಂದು ದೇಶ ಸ್ವಾತಂತ್ರ‍್ಯ ಪಡೆದ ಸಂಭ್ರಮದಲ್ಲಿದ್ದರೆ ಈ ಭಾಗಕ್ಕೆ ಸ್ವಾತಂತ್ರ‍್ಯ ದೊರೆತಿರಲಿಲ್ಲ. ಜವಾಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ದೃಢ ನಿಶ್ಚಯದಿಂದಾಗಿ ಒಕ್ಕೂಟ ವ್ಯವಸ್ಥೆಗೆ ಸೇರುವಂತಾಯಿತು ಎಂದು ಸ್ಮರಿಸಿದರು.
ಮುಖ್ಯಮಂತ್ರಿಗಳು ಮಾಡಿದ ಭಾಷಣದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಕ್ಷೇತ್ರಗಳಲ್ಲಿ ನೀಡಿರುವ ಅನುದಾನ ಮತ್ತು ಕೊಡುಗೆಗಳ ಸಮಗ್ರ ಮಾಹಿತಿಗಳನ್ನು ನೀಡಿದ್ದಾರೆ. ಒಂದಷ್ಟು ವಿವರಗಳು ಇಲ್ಲಿವೆ.
ಕೆಕೆಆರ್‌ಡಿಬಿಗೆ 2013-14ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಸರ್ಕಾರದಿಂದ 24,780 ಕೋಟಿ ರೂ. ಅನುದಾನ ಹಂಚಿಕೆ.ಇದುವರೆಗೆ 14,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ. 41,103 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 32,985 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 8,118 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.
11.ಕೆ.ಕೆ.ಆರ್.ಡಿ.ಬಿ.ಗೆ ಪ್ರಸಕ್ತ 2025-26ನೇ ಸಾಲಿಗೆ 5,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಡಾ. ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯ ಮಂಡಳಿಯು ಸಿದ್ಧಪಡಿಸಿದ್ದ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದ್ದು, ಕಾಮಾಗಾರಿಗಳು ಆರಂಭವಾಗುತ್ತಿವೆ .371-ಜೆ ಸ್ಥಾನಮಾನ ದೊರೆತ ನಂತರ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ.8ರಷ್ಟು ಸ್ಥಾನಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಪರಿಣಾಮ 2014-15 ರಿಂದ 2024ರ ಶೈಕ್ಷಣಿಕ ಸಾಲಿನವರೆಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.
ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಎರಡು ವರ್ಷದಿಂದ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮ ರೂಪಿಸಿ ಇದೂವರೆಗೆ 6,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಟ್ಟು 5,267 ಶಿಕ್ಷಕರ ಹುದ್ದೆ ಭರ್ತಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ವರ್ಷದಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 350 ಕೆ.ಪಿ.ಎಸ್. ಶಾಲೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ ಉನ್ನತ ಶಿಕ್ಷಣಕ್ಕೂ ಕಳೆದ ಎರಡು ವರ್ಷಗಳಲ್ಲಿ 250 ಕೋಟಿ ರೂ. ಒದಗಿಸಿದ್ದೇವೆ.
2024-25ರಿಂದ ಈವರೆಗೆ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಹೊಸ ವಸತಿ ನಿಲಯಗಳ ನಿರ್ಮಾಣಕ್ಕಾಗಿ 306 ಕೋಟಿ ರೂ., ಅಲ್ಪಸಂಖ್ಯಾತರ 41 ವಸತಿ ನಿಲಯ/ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ 204 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆ ವತಿಯಿಂದ 316 ಕೋಟಿ ರೂ. ವೆಚ್ಚದಲ್ಲಿ 14 ವಸತಿ ನಿಲಯ/ವಸತಿ ಶಾಲೆಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ ಈ ಜಿಲ್ಲೆಗಳ ವಸತಿ ನಿಲಯ/ವಸತಿ ಶಾಲೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ ಪ್ರದೇಶದ 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು 48 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಭಾಗದ ಮಕ್ಕಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ಕಲಬುರಗಿಯಲ್ಲಿ ನೈಸ್ ಅಕಾಡೆಮಿ [ನಾಗಾವಿ ಇನ್ಸ್ಟಿಟ್ಯೂಟ್ ಆಫ್ ಕಾಂಪಿಟೇಟಿವ್ ಎಕ್ಸಾಮ್ಸ್ ಸಂಸ್ಥೆ ಸ್ಥಾಪಿಸಿದ್ದೇವೆ. 2,000 ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್, ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.
ವೈದ್ಯಕೀಯ ಕ್ಷೇತ್ರಕ್ಕೆ ಭರಪೂರ ಅನುದಾನ
ಕಲಬುರಗಿಯಲ್ಲಿ 163 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. 28 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯಸೌಧದ ಕಟ್ಟಡ, ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 72 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಮುಂತಾದ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಕಲಬುರಗಿಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಸ್ಥಾಪಿಸಲು 100 ಕೋಟಿ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ 221 ಕೋಟಿ ರೂ. ಒದಗಿಸಲಾಗಿದೆ. ಪ್ರಾದೇಶಿಕ ಎಂಡೋಕ್ರೊನಾಲಜಿ ಕೇಂದ್ರಗಳನ್ನು ಆರಂಭಿಸುವುದಕ್ಕಾಗಿ 50 ಕೋಟಿ ರೂ. ನೀಡಲಾಗಿದೆ. ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗವನ್ನು ಆರಂಭಿಸುವುದಕ್ಕಾಗಿ 18 ಕೋಟಿ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವುದಕ್ಕಾಗಿ 100 ಕೋಟಿ, ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲು 50 ಕೋಟಿ, ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ಹೊಸದಾಗಿ ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲು ಒಟ್ಟು 18 ಕೋಟಿ ರೂ. ಅನುದಾನ.
ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ಕಟ್ಟಡ ಮತ್ತು ಉಪಕರಣಗಳಿಗಾಗಿ 287 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. 9.60 ಕೋಟಿ ರೂ.ಗಳ ಮೊತ್ತದಲ್ಲಿ ಕೆ.ಕೆ.ಆರ್.ಡಿ.ಬಿ. ಹಾರ್ಟ್ ಲೈನ್ ಯೋಜನೆಗೆ ಇಂದಿಲ್ಲಿ ಚಾಲನೆ ನೀಡಲಾಗುತ್ತಿದ್ದು, 32 ಅಂಬ್ಯುಲೆನ್ಸ್ ಗಳನ್ನು ಅಗತ್ಯ ಉಪಕರಣಗಳೊಂದಿಗೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ. ರಾಯಚೂರಿನಲ್ಲಿ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರವು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲು ಸಿದ್ಧ. ಕೇಂದ್ರಕ್ಕೆ ಹಲವಾರು ಪತ್ರಗಳನ್ನು ಬರೆದಿದ್ದೇವೆ. ಕೇಂದ್ರದ ಸಚಿವರುಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ.
ಕಲಬುರಗಿ ಜಿಲ್ಲೆಯಲ್ಲಿ 100ಕ್ಕೂ ಅಧಿಕ ರೊಟ್ಟಿ ಮಾಡುವ ಯಂತ್ರಗಳನ್ನು ಮಹಿಳೆಯರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘದವರಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗಿದೆ. ಹೊರ ರಾಜ್ಯ ಸೇರಿದಂತೆ ವಿದೇಶಗಳಿಗೆ ಸಹ ಮಾರುಕಟ್ಟೆಯನ್ನು ವಿಸ್ತರಿಸಲು ಆನ್‌ಲೈನ್ ಮುಖಾಂತರ ವೇದಿಕೆ ಸೃಜಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣ ಅಗತ್ಯವಿರುವುದರಿಂದ ಕಲಬುರಗಿಯಲ್ಲಿ ಅಗ್ರಿ-ಟೆಕ್ ವೇಗವರ್ಧಕ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತೋಟಗಾರಿಕಾ ಟೆಕ್ ಪಾರ್ಕಿನ ಅಭಿವೃದ್ಧಿಗಾಗಿ 8.05 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 10 ಕೋಟಿ ರೂ. ಅನುದಾನವನ್ನು ಪ್ರಥಮ ಹಂತದಲ್ಲಿ ನೀಡಲು ತೀರ್ಮಾನಿಸಿದೆ. ಕಲಬುರಗಿ-ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ಆಧುನೀಕೃತ ಡೈರಿ ಯೋಜನೆಯಡಿ ಕಲಬುರಗಿಯಲ್ಲಿ 50 ಕೋಟಿ ರೂ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪಿಸಲಾಗುತ್ತಿದೆ.
ಚಿತ್ತಾಪೂರ ತಾಲೂಕಿನ ಕೆರೆ ತುಂಬಿಸುವ ಕಾಮಗಾರಿ, ಜೇವರ್ಗಿ ತಾಲೂಕಿನ ಬಾಂದಾರ ನಿರ್ಮಾಣ ಕಾಮಗಾರಿ, ಸೇಡಂ ತಾಲೂಕಿನ ಕಾಚೂರು ಗ್ರಾಮದ ಹತ್ತಿರ ಏತ ನೀರಾವರಿ ಯೋಜನೆ, ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿಕೆರೆ ತುಂಬಿಸುವ ಕಾಮಗಾರಿಗಳಿಗೆ ಒಟ್ಟು 480 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಆಳಂದ ತಾಲೂಕಿನ ಖಂಡಾಳ, ಮಟಕಿ, ನಿರಗುಡಿ, ಪಡಸಾವಳಿ, ಬಸಂತವಾಡಿ, ನಿಂಬರ್ಗಾ ಮುಂತಾದ ಕಡೆ ನಾಲೆ, ಕಿರುಸೇತುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ.ಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ 3,687 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಕಾಮಗಾರಿಗಳನ್ನು ಶೀಘ್ರವಾಗಿ ಅನುಷ್ಠಾನ ಮಾಡಲು ಸೂಚಿಸಲಾಗಿದೆ. ಚಿತ್ತಾಪುರದ ತೆಲಂಗಾಣ ಗಡಿ ಪುಟಪಾಕ್- ಭೋಸ್ಲಾ ರಾಜ್ಯ ಹೆದ್ದಾರಿ ಕಾಗಿಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 53 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ.