“ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ, ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನಿಗದಿ, ಪಾಲಿಕೆ ಆಯುಕ್ತರಿಗೆ ನಗರ ಸಂಚಾರ ವೇಳಾಪಟ್ಟಿ ನೀಡಲು ಸೂಚಿಸಲಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಜಿಬಿಎ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ರಸ್ತೆ ಬದಿ ಸೇರಿದಂತೆ ನಗರಾದ್ಯಂತ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿ ಗಳಿಗೆ ತಿಳಿಸಿದ್ದೇನೆ. ವಾಹನಗಳಲ್ಲಿ ಕಸ ತಂದು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಹಾಗೂ ಸಂಚಾರಿ ಪೊಲೀಸರೊಟ್ಟಿಗೆ ಚರ್ಚೆ ನಡೆಸಲಾಗಿದೆ” ಎಂದರು.
“ಗಡುವಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು, ಈ ಬಗ್ಗೆ ಗಡುವಿನ ವೇಳಾಪಟ್ಟಿ ತಯಾರಿಸಿ ನನಗೆ ನೀಡಬೇಕು. ಸಂಚಾರಿ ಪೊಲೀಸ್ ವಿಭಾಗದವರು ಸಹ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚಿಸಿದ್ದೇನೆ” ಎಂದು ಹೇಳಿದರು.
“ಪಾಲಿಕೆಗಳ ಆಯುಕ್ತರು ಪ್ರತಿದಿನ ಬೆಳಿಗ್ಗೆ ನಗರ ಸಂಚಾರದ ಬಗ್ಗೆ ನನಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದೇನೆ. ಯಾವುದೇ ಕೆಲಸ ತೆಗೆದುಕೊಂಡರೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಕೆಲಸ ಮಾಡಲಾಗಿದೆ ಎಂದು ಯಾರೂ ಬೋಗಸ್ ಬಿಲ್ ಬರೆಯುವಂತಿಲ್ಲ. ಒಂದೊಮ್ಮೆ ಈ ರೀತಿಯಾದರೆ ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆ. ಯಾವುದೇ ಇಂಜಿನಿಯರ್ ಗಳನ್ನು ನಂಬಬೇಡಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಮರು ಎಣಿಕೆ ಆದೇಶ ಆಶ್ಚರ್ಯ , ನಂಜೇಗೌಡ ಮತ್ತೆ ಗೆಲ್ಲುವ ವಿಶ್ವಾಸ
ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಕೇಳಿದಾಗ, “ನ್ಯಾಯಲಯದ ಮರು ಎಣಿಕೆ ಆದೇಶ ಆಶ್ಚರ್ಯ ತಂದಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಮರು ಮತ ಎಣಿಕೆ ನಡೆದರೂ ನಂಜೇಗೌಡ ಅವರು ಮತ್ತೆ ಗೆಲ್ಲುವ ವಿಶ್ವಾಸವಿದೆ” ಎಂದರು.
2023ರ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ ತೀರ್ಪು ನೀಡಿದೆ. ನಾಲ್ಕು ವಾರದ ಒಳಗೆ ಮರು ಎಣಿಕೆ ಮಾಡಿ, ಹೊಸದಾಗಿ ಚುನಾವಣಾ ಫಲಿತಾಂಶ ಪ್ರಕಟಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಮಾಲೂರು ಶಾಸಕ ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿದೆ.
ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡ ಪರ ವಕೀಲರು ಆದೇಶವನ್ನು 30 ದಿನ ಅಮಾನತಿನಲ್ಲಿಡುವಂತೆ ಮನವಿ ಮಾಡಿದರು. ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ ಅವರು 248 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಮತ ಮರು ಎಣಿಕೆಗೆ ಕೋರಿ ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.