ನಟ ಯಶ್ ಅವರ ತಾಯಿ ಹಾಗೂ ಕೊತ್ತಲವಾಡಿ ಚಿತ್ರ ನಿರ್ಮಾಪಕಿ ಪುಷ್ಪ ಸಂಭಾವನೆ ನೀಡದೆ ವಂಚಿಸಿರುವುದಾಗಿ ಚಿತ್ರದ ಸಹ ನಟ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ಮಹೇಶ್ ಈ ಕುರಿತು ವೀಡಿಯೊ ಬಿಡುಗಡೆಗೊಳಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕೊತ್ತಲವಾಡಿ ಚಿತ್ರದಲ್ಲಿ ನಾಯಕ ಪೃಥ್ವಿ ಅಂಬರ್ ಜೊತೆಗೆ ಸಹ ನಟನಾಗಿ ಕಾಣಿಸಿಕೊಂಡಿದ್ದ ಮಹೇಶ್ ಅವರನ್ನು ನಿರ್ದೇಶಕ ಶ್ರೀರಾಜ್ ಆಯ್ಕೆ ಮಾಡಿದ್ದರು.
ಚಿತ್ರದ ಡಬ್ಬಿಂಗ್ ಮತ್ತು ಚಿತ್ರೀಕರಣ ಸೇರಿದಂತೆ ಎಲ್ಲ ಕೆಲಸಗಳನ್ನು ಮುಗಿಸಿದ ನಂತರ ಚಿತ್ರ ಬಿಡುಗಡೆಯಾಗಿದ್ದರೂ ನನಗೆ ಸಂಭಾವನೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೀರೊ ಪೃಥ್ವಿ ಅಂಬರ್ ಸರ್ ಅವರ ಸಹನಟನಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ನಮಗೆ ಒಂದು ಪ್ಯಾಕೇಜ್ ಮಾತಾಡಿದ್ದು ನಿರ್ದೇಶಕರು. ತಿಂಗಳಿಗೆ ಇಷ್ಟು ಮತ್ತು ಡೈಲಿ ಕನ್ವಿನಿಯೆನ್ಸ್ ಇಷ್ಟು ಎಂದು ಹೇಳಿದ್ದರು. ಸಿನಿಮಾ ಶುರುವಾಗುವ ಮೊದಲು ಅಡ್ವಾನ್ಸ್ ಮಾಡಿಸ್ತೀನಿ ಅಂದಿದ್ದರು. ಆದರೆ ಚಿತ್ರ ಬಿಡುಗಡೆಯಾದರೂ ಪೇಮೆಂಟ್ ಸಿಕ್ಕೇ ಇಲ್ಲ. ನನಗೆ ಮೋಸ ಆಗಿದೆ ಎಂದು ಮಹೇಶ್ ಹೇಳಿಕೊಂಡಿದ್ದಾರೆ.
ಪುಷ್ಪ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ, ನಿರ್ದೇಶಕ ಶ್ರೀರಾಜ್ ಅವರು ಪ್ರೊಡಕ್ಷನ್ ಕಡೆಯಿಂದ ಪೇಮೆಂಟ್ ಬಂದಿಲ್ಲ ಎಂದು ಹೇಳಿದ್ದಾರೆ. ಕಾಲ್ ಮಾಡಿದರೆ ಕಾಲ್ ಕಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವೀಡಿಯೊ ನಿರ್ಮಾಪಕಿ ಪುಷ್ಪ ಅವರಿಗೆ ತಲುಪಬೇಕು, ಬಡ ಕಲಾವಿದನಿಗೆ ನ್ಯಾಯ ಸಿಗಬೇಕು ಎಂದು ಮಹೇಶ್ ಹೇಳಿದ್ದಾರೆ. ಮಹೇಶ್ ಅವರ ಈ ವೀಡಿಯೊ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಿಂದ ಕಲಾವಿದರಿಗೆ ಸಂಭಾವನೆಯ ವಿಷಯದಲ್ಲಿ ನಡೆಯುವ ಅನ್ಯಾಯದ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.