ಆರೋಗ್ಯ, ಅನಾರೋಗ್ಯ, ವಯಸ್ಸು, ಹಳ್ಳಿ, ನಗರ, ಶ್ರಮಿಕ, ಸೋಮಾರಿ ಎಂಬ ವ್ಯತ್ಯಾಸವೇ ಇಲ್ಲದೆ ಹೃದಯಾಘಾತದಿಂದ ಸಾವು ಎಂಬುದು ಇಂದು ಸಾಮಾನ್ಯ ಎಂಬಂತಾಗಿದೆ. ಕರ್ತವ್ಯದಲ್ಲಿದ್ದ ಕೆಎಸ್ಸಾರ್ಟಿಸಿ ಚಾಲಕರೊಬ್ಬರು ನೆಲಮಂಗಲದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತ ಕಾಣಿಸಿಕೊಂಡು ಸಾವಿನ ಕದ ತಟ್ಟುತ್ತಿದ್ದ ವೇಳೆ ಕೂಡ ಆ ಚಾಲಕ ಸಮಯಪ್ರಜ್ಞೆ ಮತ್ತು ಮಾನವೀಯತೆ ಮೆರೆದು ಬಸ್‌ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ. ಉತ್ತರ ಕರ್ನಾಟಕದ ರಾಜೀವ್ ಬಿರಾದಾರ್ (50) ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಚಲಾಯಿಸುತ್ತಿದ್ದರು.
ನೆಲಮಂಗಲದ ಜಾಸ್ ಟೋಲ್ ತಲುಪುವ ಮೊದಲು ಅವರಿಗೆ ಸ್ವಲ್ಪ ಆರಾಮ ಇಲ್ಲ ಅನಿಸಿ ಐದು ನಿಮಿಷ ವಿಶ್ರಾಂತಿ ಪಡೆದಿದ್ದರು. ಬಳಿಕ ಬಸ್ ಚಲಾಯಿಸಿಕೊಂಡು ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಎದೆನೋವು ತೀವ್ರಗೊಂಡಿದೆ. ತಕ್ಷಣ ಅವರು ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.
ಸಾವಿನ ತೆಕ್ಕೆಗೆ ಹೋಗುತ್ತಿರುವಾಗ ಚಾಲಕ ಮಾಡಿದ ಈ ಕೆಲಸದಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಉಳಿದಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದು, ಅದು ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್ ಬಿರಾದಾರ್ ಮೃತಪಟ್ಟಿದ್ದಾರೆ.