Tuesday, September 16, 2025
Menu

ಪಾಲಿಕೆಯೇ ಪಾಪರ್‌ ಆಗಿರುವಾಗ  ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಆರ್.ಅಶೋಕ

ಕಾಂಗ್ರೆಸ್‌ ಬಂದ ನಂತರ ಪಾಲಿಕೆಯನ್ನು ಐದು ಹೋಳು ಮಾಡಲಾಗಿದೆ. 198 ವಾರ್ಡ್‌ಗೆ 90% ನಷ್ಟು ಇಂಜಿನಿಯರ್‌ ಇಲ್ಲ. ಪಾಲಿಕೆಯೇ ಪಾಪರ್‌ ಆಗಿರುವ ಸಮಯದಲ್ಲಿ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ? ಒಂದು ಸಾವಿರಕ್ಕೂ ಅಧಿಕ ನೇಮಕಾತಿ ಮಾಡಿದರೆ ಹಣ ಎಲ್ಲಿಂದ ತರುತ್ತಾರೆ? ಬಹಳ ಕಡೆ ಶಂಕುಸ್ಥಾಪನೆಯಾಗಿ, ಕಾಮಗಾರಿ ಸ್ಥಗಿತವಾಗಿದೆ. ಇಂತಹ ಸ್ಥಿತಿಯಲ್ಲಿ ಆಡಳಿತ ನಡೆಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  5,000 ಕೋಟಿ ರೂ. ಬಿಡುಗಡೆಯಾಗಿದ್ದರೂ  ಬೆಂಗಳೂರಿನಲ್ಲಿ ರಸ್ತೆ ದುರಸ್ತಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ 20 ಲೀಟರ್‌ ನೀರಿನ ದರವನ್ನು 5 ರಿಂದ 10 ರೂ. ಗೆ ಏರಿಸಲಾಗಿದೆ. ತೈಲ ದರ, ಹಾಲಿನ ದರ ಏರಿಕೆ, ಹೊಸದಾಗಿ ಕಸ ಶುಲ್ಕ ಹೇರಲಾಗಿದೆ. ಇನ್ನು ಗಾಳಿಗೂ ಶುಲ್ಕ ತಂದರೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರು ಸಾಕಾರವಾಗಲಿದೆ. 65-70,000 ಕೋಟಿ ರೂ.ನಷ್ಟು ಹೆಚ್ಚುವರಿ ತೆರಿಗೆಯನ್ನು ಹೇರಲಾಗಿದೆ  , ಎಂದರು.

ವಯನಾಡಿನಲ್ಲಿ  ಆನೆಯಿಂದ ಸತ್ತವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹಾಸನದಲ್ಲಿ ನಡೆದ ಘಟನೆಯಲ್ಲಿ ಸಂತ್ರಸ್ತರಿಗೆ ಮಾನವೀಯತೆ ಆಧಾರದಲ್ಲಿ ಹೆಚ್ಚು ಪರಿಹಾರ ನೀಡಬೇಕಿತ್ತು. ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ರಾಜ್ಯದ ಜನರ ಮೇಲೆ ಮಾನವೀಯತೆ ಇಲ್ಲ . ಆನೇಕಲ್‌ನಲ್ಲಿ ಫಲವತ್ತಾದ ಸಾವಿರಾರು ಎಕರೆ ಜಮೀನು ಸ್ವಾಧೀನ ಮಾಡಲಾಗಿದೆ. ಬಿಡದಿ ನೀರಾವರಿ ಪ್ರದೇಶವಾಗಿದ್ದು, ಇಲ್ಲಿನ ಸ್ವಾಧೀನವನ್ನು ಹಿಂದಿನ ಸರ್ಕಾರ ರದ್ದು ಮಾಡಿದೆ. ಆದರೆ ಈಗ ಮತ್ತೆ ಸ್ವಾಧೀನ ಮಾಡಲಾಗುತ್ತಿದೆ. ಕೆಂಗೇರಿ, ಯಲಹಂಕ ಸೇರಿದಂತೆ ರೈತರ 50,000 ಎಕರೆ ಜಮೀನನ್ನು ಸ್ವಾಧೀನ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ವೇಗವಾಗಿ ಗುಂಡಿ ಅಗೆದಿದೆ. ಆದರೆ ತನಿಖೆ ನಿಧಾನವಾಗಿದೆ. ತನಿಖೆಗೆ ಒಳಪಟ್ಟವರು ಹೊರಗೆ ಬಂದು ಮಾಧ್ಯಮಗಳ ಜೊತೆ ಮಾತಾಡಿದ್ದಾರೆ. ಈ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ. ಇದು ಸರಿಯಾಗಿ ತನಿಖೆಯಾಗಬೇಕು. ಇದಕ್ಕಾಗಿ ಕೋರ್ಟ್‌ ಮೊರೆ ಕೂಡ ಹೋಗುತ್ತೇವೆ. ಧರ್ಮಸ್ಥಳವನ್ನು ಹಾಳು ಮಾಡಲು ಕಮ್ಯುನಿಸ್ಟ್‌ಗಳು ಪ್ರಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ.

ಸಿಎಂ ಸಿದ್ದರಾಮಯ್ಯ ಎಂದರೆ ಮತಾಂತರದ ರಾಯಭಾರಿ. ಯಾರೂ ಯೋಚನೆ ಮಾಡದಂತಹ ಜಾತಿಗಳನ್ನು ಅವರು ಸೃಷ್ಟಿಸಿದ್ದಾರೆ.  ಸಂವಿಧಾನದಲ್ಲಿ ಇಲ್ಲದ ಜಾತಿಗಳನ್ನು ಸಿಎಂ ಸಿದ್ದರಾಮಯ್ಯ ಹುಟ್ಟುಹಾಕಿದ್ದಾರೆ. ಇಂತಹ ಜಾತಿ ಸಮೀಕ್ಷೆ ರದ್ದಾಗಲಿದೆ. ಈ ಸಮೀಕ್ಷೆ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಿ, ಹಿಂದೂಗಳನ್ನು ತುಳಿಯಲಾಗುತ್ತಿದೆ. ಏನೇ ಮಾಡಿದರೂ ಸಂವಿಧಾನದ ಪ್ರಕಾರ ಮಾಡಲಿ. ಮೀಸಲಾತಿಗೆ ಸಂಬಂಧಿಸಿದಂತೆ ಕೋರ್ಟ್‌ ಆದೇಶವಿದೆ. ಅದರ ಪ್ರಕಾರ ಕ್ರಮ ವಹಿಸಲಿ ಎಂದರು.

ಮುಸ್ಲಿಂ ಹಬ್ಬಗಳನ್ನು ಹಿಂದೂಗಳ ಕೈಯಲ್ಲಿ ಉದ್ಘಾಟನೆ ಮಾಡಿಸಲಿ. ದಸರಾ ಉದ್ಘಾಟನೆಯನ್ನು ಹಿಂದೂಗಳ ಕೈಯಲ್ಲಿ ಮಾಡಿಸಬೇಕಿತ್ತು. ಈ ಹಬ್ಬವನ್ನು ಮೈಸೂರು ಅರಸರು ಮಾಡಿಕೊಂಡು ಬಂದಿದ್ದಾರೆ. ಇದು ಪರಂಪರೆಯೇ ಹೊರತು ಕಾನೂನಲ್ಲ. ಆದ್ದರಿಂದ ಇದಕ್ಕಾಗಿ ಪ್ರತ್ಯೇಕ ಕಾನೂನು ತರುವ ಅಗತ್ಯವಿದೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದು ಎಂಬಂತೆ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿದೆ ಎಂದು ಹೇಳಿದರು.

 

Related Posts

Leave a Reply

Your email address will not be published. Required fields are marked *