ನೇಪಾಳವನ್ನು ಪೀಡಿಸಿರುವ ಮಹಾಭ್ರಷ್ಟಾಚಾರವನ್ನು ನೂತನ ಪ್ರಧಾನಿ ಕರ್ಕಿ ಅವರು ಬಹುಶೀಘ್ರವಾಗಿ ನಿರ್ಮೂಲನೆ ಮಾಡುವುದಾಗಿ ಶಪಥ ತೊಟ್ಟಿದ್ದಾರೆ. ಅವರ ಪ್ರಜಾ ನ್ಯಾಯ ಕಾಪಾಡುವ ಮತ್ತು ದೇಶದ ಕ್ಷೇಮವನ್ನು ಕಾಪಾಡುವ ಶಪಥ ಈಡೇರಲಿ ಎಂಬುದೇ ಭಾರತದ ಆಶಯ. ಭಾರತದ ನೆರೆಯ ದೇಶದಲ್ಲೀಗ ಪ್ರಜಾತಂತ್ರದ ಮರುಸ್ಥಾಪನೆ. ಭಾರತೀಯ ಸಂಸ್ಕೃತಿಯ ಮಹಿಳೆ ಪ್ರಜಾತಂತ್ರ ವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದಾರೆ. ಇದು ನೇಪಾಳದ ರಾಜಕೀಯ ಇತಿಹಾಸದಲ್ಲಿ ಒಂದು ಅಪೂರ್ವ ಅಧ್ಯಾಯ.
ದೇಶದ ಸರ್ವೋನ್ನತ ನ್ಯಾಯ ಸ್ಥಾನವನ್ನು ಅಲಂಕರಿಸಿ ಸೇವೆಯಿಂದ ನಿವೃತ್ತಗೊಂಡ ಸುಶೀಲಾ ಕರ್ಕಿ ಅವರ ಮೇಲೆ ಈಗ ನೇಪಾಳ ದೇಶದ ಗುರುತರ ಹೊಣೆಗಾರಿಕೆ. ವಾರದ ಹಿಂದೆ ಹಿಂದೂ ದೇಶವಾದ ನೇಪಾಳ ಆಂತರಿಕ ಬೃಹತ್ ಸಮಸ್ಯೆಯಿಂದ ತತ್ತರಿಸಿತು. ರಾಜಕೀಯವಾಗಿ ಇದು ಸರ್ಕಾರದ ಮೇಲೆ ಭಾರಿ ಪರಿಣಾಮ ಬೀರಿತು. ಸರ್ಕಾರದ ವರ್ತನೆ ಮತ್ತು ಧೋರಣೆಯಿಂದ ರೋಸಿ ಹೋಗಿದ್ದ ನೇಪಾಳಿಯರ ಸಹನೆ ಮತ್ತು ತಾಳ್ಮೆ ಕಟ್ಟೆ ಒಡೆದು ಅದು ಬೀದಿಗೆ ಬಂತು. ಇದು ಒಂದಷ್ದು ಮಂದಿಯನ್ನು ಬಲಿ ತೆಗೆದುಕೊಂಡಿತು. ಜನತೆ ಒಂದು ಗರಿಷ್ಠ ಹಂತದವರೆಗೆ ಎಲ್ಲವನ್ನೂ ಸಹಿಸುವುದು ಸಹಜ, ಆದರೆ ಮಿತಿ ಮೀರಿದರೆ ಜನಾಂದೋಲನ ಮತ್ತು ಕ್ರಾಂತಿಯ ಜ್ವಾಲೆಗಳನ್ನು ಯಾರಿಂದಲೂ ನಂದಿಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಅನ್ಯಾಯ ಅಕ್ರಮ ಮತ್ತು ಅನಾಚಾರಗಳನ್ನು ಪ್ರಪಂಚದ ಯಾವ ನಾಗರಿಕ ಸಮಾಜವೂ ಒಪ್ಪವುದಿಲ್ಲ . ಇದನ್ನು ಸುಮ್ಮನೆ ನೋಡುತ್ತ ಕೂರುವುದೂ ಇಲ್ಲ.
ಆಡಳಿತದ ಪ್ರಭುಗಳಿಂದ ಅರಾಜಕತೆ ಮತ್ತು ಮಿತಿಮೀರಿದ ಭ್ರಷ್ದತೆ ತಾಂಡವವಾಡಿದಾಗ ಇದನ್ನು ಜನತೆ ಸಹಿಸುವುದೂ ಇಲ್ಲ. ಲಂಚಗುಳಿತನ ಮತ್ತು ಅಕ್ರಮಗಳು ಸರ್ಕಾರದ ಮಟ್ಟದಲ್ಲಿಯೇ ಹಿಮಾಲಯದ ಎತ್ತರಕ್ಕೆ ಬೆಳೆದರೆ ಇದರಿಂದ ದೇಶದ ಸಾಮಾನ್ಯನ ಮೇಲೆ ಅತಿ ಕೆಟ್ಟ ಪರಿಣಾಮ ಬೀರುವುದರಲ್ಲಿ ಯಾವ ಅನುಮಾನವೂ ಇಲ್ಲ.
ಜನತೆಯ ಸಾಮಾನ್ಯ ಬದುಕಿನ ಮೇಲೆ ಮಿತಿಮೀರಿದ ಲಂಚಗುಳಿತನ ಮತ್ತು ಅಧಿಕಾರಶಾಹಿ ಭ್ರಷ್ಟಾಚಾರ ಎಂಬುದು ಮಹಾರಾಕ್ಷಸ ಎಂಬುದನ್ನು ಪ್ರತಿಯೊಂದು ಪ್ರಜಾತಾಂತ್ರಿಕ ಸರ್ಕಾರಗಳು ಅರಿಯುವುದು ಅನಿವಾರ್ಯ. ಮೇಲಿಂದ ಮೇಲೆ ಇಂತಹ ಕ್ರಿಪ್ರ ಕ್ರಾಂತಿಗಳು ಭಾರತದ ಆಸುಪಾಸಿನಲ್ಲಿಯೇ ನಡೆಯುತ್ತಿವೆ. ಒಂದು ವರ್ಷದ ಹಿಂದೆ ಬಾಂಗ್ಲಾದೇಶದಲ್ಲಿ ಆಕ್ರೋಶಭರಿತ ಜನತೆ ಬೀದಿಗಿಳಿದು ಅಲ್ಲಿನ ಸರ್ಕಾರವನ್ನು ಕೆಳಗಿಳಿಸಿದರು. ಈ ದೇಶದ ಪ್ರಧಾನಿ ಆಗಿದ್ದ ಶೇಕ್ ಹಸೀನಾ ದೇಶ ಬಿಟ್ಟು ಪರಾರಿಯಾದರು. ಹಸೀನಾ ಜೀವವನ್ನು ಉಳಿಸಿಕೊಳ್ಳಲು ಆಸರೆ ನೀಡಿರುವುದು ಭಾರತ ಎಂಬುದು ಗಮನಾರ್ಹ. ಐದು ವರ್ಷಗಳ ಮಿತಿ ಮೀರಿದ ತೆರಿಗೆಗಳಿಂದ ರೋಸಿ ಹೋಗಿದ್ದ ಸಿಂಹಳೀಯರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿದರು ಮತ್ತು ಪ್ರಧಾನಿ ಕುಟುಂಬವನ್ನು ಅಟ್ಟಾಡಿಸಿದರು.
ಈ ಘಟನೆಗಳಿಂದ ಪ್ರಜಾತಂತ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷಗಳು ಕಲಿಯುವ ಪಾಠ ಬಹಳಷ್ಟಿದೆ. ದೇಶದ ಸಮಗ್ರ ಜನತೆ ಒಮ್ಮೆಲೆ ತಿರುಗಿ ಬಿದ್ದರೆ ಇದನ್ನು ನಿಯಂತ್ರಿಸಲು ಸರ್ಕಾರದ ಬಳಿಯಿರುವ ಮಿಲಿಟರಿ ಮತ್ತು ಎಲ್ಲ ಶಕ್ತಿಗಳೂ ಸಾಕಾಗದು ಎಂಬುದನ್ನು ಅರಿಯಬೇಕು. ಪ್ರಪಂಚದ ರಾಜಕೀಯ ಇತಿಹಾಸವನ್ನು ಹೀಗೆ ಬರೆಯಲಾಗಿದೆ. ಇದು ಸತ್ಯ ಕೂಡಾ. ಒಟ್ಟಿನಲ್ಲಿ ನೇಪಾಳವನ್ನು ಪೀಡಿಸಿರುವ ಮಹಾಭ್ರಷ್ಟಾಚಾರವನ್ನು ನೂತನ ಪ್ರಧಾನಿ ಕರ್ಕಿ ಬಹುಶೀಘ್ರವಾಗಿ ನಿರ್ಮೂಲನೆ ಮಾಡುವುದಾಗಿ ಶಪಥ ತೊಟ್ಟಿದ್ದಾರೆ.