ನೇಪಾಳದಲ್ಲಿ Gen-Z ಆಕ್ರೋಶ, ಹಿಂಸಾಚಾರ, ಕೆಪಿ ಒಲಿ ಶರ್ಮಾ ಪದಚ್ಯುತಿ ಬಳಿಕ ಪ್ರತಿಭಟನೆ ಕೊನೆಗೊಂಡ ನಂತರ ಸುಶೀಲಾ ಕರ್ಕಿ ಅವರನ್ನು ಚುನಾಯಿತ ನಾಯಕಿಯಾಗಿ ಆಯ್ಕೆ ಮಾಡಿದ್ದಲ್ಲದೆ, ಭಾನುವಾರ ಅವರು ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ಕೂಡ ವಹಿಸಿಕೊಂಡರು.
ಆದರೆ ಸುಶೀಲಾ ಕರ್ಕಿ ಅಧಿಕಾರ ವಹಿಸಿಕೊಂಡು ಸಂಜೆಯಾಗಬೇಕಾದರೆ ಈ ಪ್ರತಿಭಟನಾಕಾರರು ಕರ್ಕಿ ಮೇಲೂ ಕೆಂಗಣ್ಣು ಬೀರಿದ್ದಾರೆ. ಕ್ಯಾಬಿನೆಟ್ ಮಂತ್ರಿಗಳ ಆಯ್ಕೆ ಬಗೆಗಿನ ಅಸಮಾಧಾನವು ಅವರನ್ನು ಕುರ್ಚಿಯಿಂದ ಕೆಳಗಿಳಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸುವವರೆಗೆ ಮುಟ್ಟಿದೆ.
ಜನರಲ್ ಝಡ್ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸುಡಾನ್ ಗುರುಂಗ್, ಅವರನ್ನು ಕುರ್ಚಿಯ ಮೇಲೆ ಕೂರಿಸಿದ ನಂತರ ಅವರನ್ನು ಕುರ್ಚಿಯಿಂದ ಕೆಳಗಿಳಿಸಲೂಬಹುದು ಎಂದು ಹೇಳಿದ್ದಾರೆ. ಸುಡಾನ್ ಗುರುಂಗ್, ತಮ್ಮ ಸಹೋದ್ಯೋಗಿ ಗಳೊಂದಿಗೆ ಸುಶೀಲಾ ಕರ್ಕಿ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು. ಕರ್ಕಿ ಸಂಪುಟ ಸಚಿವರ ತಂಡದಲ್ಲಿ ಯುವಕರ ಕೊರತೆ ಇರುವುದಕ್ಕೆ ಪ್ರತಿಭಟನಾಕಾರರು ಕೋಪಗೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ಪ್ರತಿಭಟನಾಕಾರರ ಕುಟುಂಬಗಳೊಂದಿಗೆ ಗುರುಂಗ್ ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದರು. ಇದು ಆಗದಿದ್ದಾಗ ಅವರು ಕೋಪಗೊಂಡು ಈ ಮಾತುಗಳನ್ನಾಡಿದ್ದಾರೆ. ಇದು ಒಂದು ಕಾರಣ. ಸರ್ಕಾರದಲ್ಲಿ ಸಚಿವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಯುವ ಪ್ರತಿಭಟನಾಕಾರರ ಅಭಿಪ್ರಾಯವನ್ನು ತೆಗೆದುಕೊಳ್ಳದ ಕಾರಣಕ್ಕೂ ಸುಡಾನ್ ಗುರುಂಗ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಕರ್ಕಿ ಸಂಪುಟದ ಮೂವರು ಸಚಿವರು ಆಯ್ಕೆಯಾಗಿದ್ದಾರೆ, ಇದು ಯುವ ಪ್ರತಿಭಟನಾಕಾರರಿಗೆ ಇಷ್ಟವಾಗಿಲ್ಲ. ಅದರಲ್ಲೂ ಒಪಿ ಆರ್ಯಲ್ ಗೃಹ ಸಚಿವರು ಎಂಬುದನ್ನು ಒಪ್ಪಲು ಸಿದ್ಧರಿಲ್ಲ.