ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಹಾಸಿಗೆ, ದಿಂಬು ನೀಡುವಂತೆ ಕೋರ್ಟ್ ಇತ್ತೀಚೆಗೆ ಆದೇಶಿಸಿದ್ದರೂ ಅಧಿಕಾರಿಗಳು ಯಾವುದೇ ಸೌಕರ್ಯ ನೀಡಿಲ್ಲ ಎಂದು ಅವರ ಪರ ವಕೀಲರು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ತುಂಬಾ ಚಳಿಯಿದೆ, ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಕಷ್ಟವಾಗುತ್ತಿದೆ. ಹೀಗಾಗಿ ದಿಂಬು, ಹಾಸಿಗೆ ಕೊಡಿಸಬೇಕು ಎಂದು ಮನವಿ ಮಾಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ದಿಂಬು, ಹಾಸಿಗೆ ಹಾಗೂ ಕನಿಷ್ಠ ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶಿಸಿತ್ತು.
ಆದರೆ ಕೋರ್ಟ್ ಆದೇಶ ಮಾಡಿದ್ದರೂ ದರ್ಶನ್‌ಗೆ ಯಾವುದೇ ಸೌಕರ್ಯ ನೀಡಿಲ್ಲ. ಹಾಸಿಗೆ, ದಿಂಬು ಒದಗಿ ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದರೂ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ವಕೀಲರು ಉಲ್ಲೇಖಿಸಿದ್ದಾರೆ.
ಬೆಂಗಳೂರಿನಲ್ಲಿ ಜೋರಾಗಿದೆ ಸರಗಳ್ಳರ ಕಾಟ
ನಗರದಲ್ಲಿ ಸರಗಳ್ಳರ ಕಾಟ ಮಿತಿ ಮೀರಿದೆ, ಕುತ್ತಿಗೆಗೆ ಲಾಂಗ್ ಇಟ್ಟು, ಬೆರಳು ಕತ್ತರಿಸಿ 55 ಗ್ರಾಂ ಮೌಲ್ಯದ ಚಿನ್ನ ಕಳ್ಳತನ ಮಾಡಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ ನಡೆದಿದೆ.
ಉಷಾ ಹಾಗೂ ವರಲಕ್ಷ್ಮಿ ಎಂಬವರ ಚಿನ್ನದ ಸರ ಕಳ್ಳತನವಾಗಿದೆ. ಅವರಿಬ್ಬರೂ ಗಣೇಶ ಹಬ್ಬದ ಆರ್ಕಿಸ್ಟ್ರಾ ನೋಡಿ ವಾಪಸ್ ಆಗುತ್ತಿದ್ದಾಗ ಕಳ್ಳರು ಬೈಕ್‌ನಲ್ಲಿ ಹಿಂದಿನಿಂದ ಬಂದು ಕುತ್ತಿಗೆಗೆ ಲಾಂಗ್ ಬೀಸಿದ್ದಾರೆ. ಗಾಬರಿಗೊಂಡ ಒಬ್ಬಾಕೆ ಭಯದಲ್ಲಿ ಚಿನ್ನದ ಸರ ನೀಡಿದ್ದಾರೆ.
ಇನ್ನೊಬ್ಬಾಕೆ ಪ್ರತಿರೋಧ ಒಡ್ಡಿದಾಗ ಆಕೆಯ ಬೆರಳು ಕಟ್ ಆಗಿದ್ದು, ಆಕೆಯ ಚಿನ್ನವನ್ನು ದೋಚಿಸಿದ್ದಾರೆ. ಉಷಾ ಅವರ 10 ಗ್ರಾಂ ಹಾಗೂ ವರಲಕ್ಷ್ಮಿ ಅವರ 45 ಗ್ರಾಂ ಚಿನ್ನದ ಸರ ಕಳವಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆರೋಪಿಗಳು ಮೊಬೈಲ್, ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ತನಿಖೆ ಮುಂದುವರಿಸಿದ್ದಾರೆ.