Monday, September 15, 2025
Menu

ಅಭಿಮಾನಿಗಳ ನಿರೀಕ್ಷೆಯಂತೆ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್‌ಗೆ ಸೋಲುಣಿಸಿ ಬೀಗಿದ ಭಾರತ

ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿ ಬಹಳಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಂತೆಯೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್ ಅಂತರದೊಂದಿಗೆ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಆರಂಭಿಕ ಬ್ಯಾಟರ್ ಅಭೀಷೇಕ್ ಶರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದ ಎದುರು ಪಾಕಿಸ್ತಾನ ತಣ್ಣಗಾಗಿ ಹೋಗಿದೆ.

ಗೆಲ್ಲಲು 128 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಅದ್ಧುತ ಆರಂಭ ನೀಡಿದರು. ಶುಭಮನ್ ಗಿಲ್‌ ಲ 10 ರನ್ ಗಳಿಸಿದರು. ಅಭಿಷೇಕ್ ಶರ್ಮಾ 13 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 238.46ರ ಸ್ಟ್ರೈಕ್‌ರೇಟ್‌ನಲ್ಲಿ 31 ರನ್ ಸಿಡಿಸಿ ಸೈಮ್ ಆಯುಬ್‌ಗೆ ಮಣಿದು ಭಾರತ ಕೇವಲ 3.4 ಓವರ್‌ಗಳಲ್ಲಿ 41 ರನ್ ಗಳಿಸಿತ್ತು.

ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ರೋಮಾಂಚನಕಾರಿ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಅಸರೆಯಾದರು. ಈ ಜೋಡಿ ಮೂರನೇ ವಿಕೆಟ್‌ಗೆ ಆಕರ್ಷಕ 56 ರನ್‌ಗಳ ಜತೆಯಾಟವಾಡಿದರು. ತಿಲಕ್ ವರ್ಮಾ 31 ಎಸೆತಗಳಲ್ಲಿ 31 ರನ್ ಸಿಡಿಸಿದರು. ‘ಎ’ ಗುಂಪಿನಲ್ಲಿ ಭಾರತ ತಂಡವು 4 ಅಂಕಗಳೊಂದಿಗೆ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಟಾಸ್ ಗೆದ್ದಿದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಮೊದಲು ಬ್ಯಾಟ್ ಮಾಡಿ ಪಾಕಿಸ್ತಾನ ಆರು ರನ್ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಶಾಹಿಝಾದ್ ಫರ್ಹಾನ್ ಹಾಗೂ ಫಖರ್ ಜಮಾನ್ 39 ರನ್‌ಗಳ ಜತೆಯಾಟವಾಡಿದರು.

ಫಖರ್ ಜಮಾನ್ ವಿಕೆಟ್ ಪತನದ ಬಳಿಕ ಪಾಕಿಸ್ತಾನ ತಂಡವು ನಾಟಕೀಯ ಕುಸಿತ ಕಂಡಿತು. ಭಾರತದ ವಿಶ್ವದರ್ಜೆಯ ಸ್ಪಿನ್ನರ್‌ಗಳ ಎದುರು ರನ್ ಗಳಿಸಲು ಪಾಕಿಸ್ತಾನ ಬ್ಯಾಟರ್‌ಗಳು ತಿಣುಕಾಡಿದರು. ಒಂದು ಹಂತದಲ್ಲಿ ಪಾಕಿಸ್ತಾನ 97 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಯಿತು.

ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಆರಂಭಿಕ ಬ್ಯಾಟರ್ ಶಾಹಿಝಾದ್ ಫರ್ಹಾನ್ 44 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 40 ರನ್ ಗಳಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ 16 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 33 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಭಾರತ ಪರ ಕುಲ್ದೀಪ್ ಯಾದವ್ 18 ರನ್ ನೀಡಿ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದುಕೊಂಡರು.

 

Related Posts

Leave a Reply

Your email address will not be published. Required fields are marked *