ಮಾವನ ಜೊತೆಗೆ ಅನೈತಿಕ ದೈಹಿಕ ಸಂಬಂಧ ಹೊಂದುವಂತೆ ಸೊಸೆಗೆ ಅತ್ತೆಯೇ ಕಿರುಕುಳ ನೀಡಿರುವ ಆರೋಪದಡಿ ಅತ್ತೆ-ಮಾವನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಯಾಸೀನ್ ಪಾಷಾ ಮತ್ತು ಪತ್ನಿ ಶಾಸೀಯಾ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಬಿಎಸ್ಎನ್ ಸೆಕ್ಷನ್ 351(2), 352,2(5) ಅಡಿ ಪ್ರಕರಣ ದಾಖಲಿಸಿದ್ದಾರೆ.
ಮಗ ಯಾಸೀನ್ ಪಾಷಾಗೆ ಶಾಸೀಯಾ ಎಂಬ ಯುವತಿ ಜೊತೆಗೆ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಮದುವೆ ಮಾಡಲು ಹುಡುಗನ ಪೋಷಕರು ನಿರಾಕರಿಸಿ ದ್ದಾರೆ. ಪೋಷಕರ ವಿರೋಧದ ನಡುವೆಯೇ ಮಗ ಯಾಸೀನ್ ಶಾಸೀಯಾ ಜೊತೆಗೆ ಮೈಸೂರಿನಲ್ಲಿ ಮದುವೆಯಾಗಿ ಮನೆಗೆ ಬಂದಿದ್ದ.
ಇದರಿಂದ ಕೋಪಗೊಂಡ ಯಾಸೀನ್ ತಾಯಿ ಹುಮೇರಾ ಹಾಗೂ ಆಕೆಯ ಗಂಡ ಅಂದರೆ ಯಾಸೀನ್ ಮಲತಂದೆ ಅಕ್ಬರ್ ಸೊಸೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಮಾವನ ಜೊತೆಗೆ ಅನೈತಿಕ ಸಂಬಂಧ ಹೊಂದುವಂತೆ ಅತ್ತೆ ಹುಮೇರಾ ಕಿರುಕುಳ ನೀಡಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದಾಳೆ ಎಂದು ಸೊಸೆ ದೂರು ನೀಡಿದ್ದಾರೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಟೀ ಚೆನ್ನಾಗಿಲ್ಲವೆಂದ ಚಾಲಕನ ಮೇಲೆ ಹಲ್ಲೆ
ಟೀ ಚೆನ್ನಾಗಿಲ್ಲ ಎಂದು ಸಿಟ್ಟಾದ ಅಂಗಡಿ ಸಿಬ್ಬಂದಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಮೆಜೆಸ್ಟಿಕ್ನಲ್ಲಿ ನಡೆದಿದೆ. ಈ ಅಂಗಡಿ ಟೀ ಚೆನ್ನಾಗಿಲ್ಲ, ಬೇರೆ ಅಂಗಡಿಗೆ ಹೋಗೋಣ ಎಂದು ಬಸ್ ಚಾಲಕ ಮುಗ್ಗಪ್ಪ ಗುಲ್ಲಪ್ಪನವರ್ ಹೇಳಿದ್ದಕ್ಕೆ ಕೋಪಗೊಂಡ ಅಂಗಡಿ ಸಿಬ್ಬಂದಿ ಪ್ಲಾಸ್ಕ್ನಿಂದ ಹಲ್ಲೆ ಮಾಡಿದ್ದಾನೆ.
ಗಾಯಗೊಂಡ ಚಾಲಕ ಮುಗ್ಗಪ್ಪ ಅವರನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಟೀ ಶಾಪ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.