ಇತಿಹಾಸದಲ್ಲೇ ಅತಿದೊಡ್ಡ ಬಲಪಂಥೀಯ ಪ್ರತಿಭಟನೆ ಲಂಡನ್‌ನಲ್ಲಿ ಆರಂಭಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 20ಕ್ಕೂ ಹೆಚ್ಚು ಪೊಲೀಸರು ಗಂಭೀರ ಗಾಯಗೊಂಡಿದ್ದಾರೆ.
ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಬೃಹತ್ ʻವಲಸೆ ವಿರೋಧಿʼ ಮೆರವಣಿಗೆಯಲ್ಲಿ ಲಕ್ಷಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಪ್ರತಿಭಟನಾ ಕಾರರನ್ನು ಚದುರಿಸುತ್ತಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಗುಂಪೊಂದು ಘರ್ಷಣೆಗೆ ಇಳಿದಿದೆ. ಕೆಲವರು ಖಾಲಿ ಬಾಟಲಿಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದ ಕರ್ತವ್ಯದಲ್ಲಿದ್ದ 26 ಮಂದಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯಕ್ಕೆ ಮುಂದಾದ ಕನಿಷ್ಠ 25 ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫಾರ್-ರೈಟ್ ಅಕ್ಟಿವಿಸ್ಟ್ ಟಾಮಿ ರಾಬಿನ್ಸನ್ (ಸ್ಟೀಫನ್ ಯ್ಯಾಕ್ಷಿ-ಲೆನ್ನನ್) ನೇತೃತ್ವದಲ್ಲಿ ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಈ ಪ್ರತಿಭಟನೆ ಆಯೋಜನೆಯಾಗಿದೆ.
ಇಂಗ್ಲಿಷ್ ಡಿಫೆನ್ಸ್ ಲೀಗ್ ಸಂಸ್ಥಾಪಕನಾದ ರಾಬಿನ್ಸನ್, ಬ್ರಿಟನ್‌ನ ಪ್ರಭಾವಶಾಲಿ ಬಲಪಂಥೀಯ ನಾಯಕ. ಪ್ರತಿಭಟನಾಕಾರರು ಇಂಗ್ಲೆಂಡ್ ಮತ್ತು ಬ್ರಿಟನ್ ಧ್ವಜಗಳನ್ನು ಹಿಡಿದು, ವೆಸ್ಟ್ ಮಿನ್‌ಸ್ಟರ್ ಕಡೆಗೆ ಮೆರವಣಿಗೆ ಹೊರಟಿದ್ದಾಗ ರಾಬಿನ್ಸನ್ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್ ಅಪ್ ಟು ರೇಸಿಸಂ ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು. ʻಮಾರ್ಚ್ ಅಗೈನ್‌ಸ್ಟ್ ಫ್ಯಾಸಿಸಂʼ ಎಂಬ ಹೆಸರಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಾರಾ ಸುಲ್ತಾನಾ ಮತ್ತು ಡಯಾನ್ ಅಬ್‌ಬಟ್ ಮತ್ತಿತರ ಸಂಸದರು ಭಾಗವಹಿಸಿದ್ದರು.
ಎರಡು ಗುಂಪುಗಳ ನಡುವಿನ ಘರ್ಷಣೆ ತಡೆಯಲು ಪೊಲೀಸರು ಹರಸಾಹಸ ಪಟ್ಟರು. ವಲಸೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಹೊರತುಪಡಿಸಿ, ಹಿಂಸಾಚಾರ ಗುರಿಯಾಗಿಸಿಕೊಂಡು ಕೆಲವರು ಬಂದಿದ್ದು, ಪೊಲೀಸರ ಮೇಲೆ ಹಲ್ಲೆಗೆ ಮುಂದಾದರು ಎಂದು ಸಹಾಯಕ ಆಯುಕ್ತ ಮ್ಯಾಟ್ ಟ್ವಿಸ್ಟ್ ಹೇಳಿದ್ದಾರೆ.