Sunday, September 14, 2025
Menu

ಸಾಲ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ, ಭವಿಷ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಸಾಲ ಮನ್ನಾ ಇಲ್ಲ: ಡಿಕೆ ಸುರೇಶ್‌ 

“ಬೆಳೆಸಾಲ,‌ ಹಸು ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ.‌ ಬೆಂಗಳೂರಿಗೆ ವಲಸೆ ಹೋಗಿ ಸೆಕ್ಯುರಿಟಿ ಗಾರ್ಡ್ ಗಳಾಗಿ, ಹೋಟೆಲ್ ಕೆಲಸ ಮಾಡಿಕೊಂಡು ಕಷ್ಟದಲ್ಲಿ ಜೀವನ ತಳ್ಳಬೇಡಿ. ಸ್ವಂತ ಊರಿನಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ” ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್  ಹೇಳಿದ್ದಾರೆ.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕನಕಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕನಕಪುರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳೆಸಾಲ, ಸ್ತ್ರೀ ಶಕ್ತಿ ಸಹಾಯ ಸಂಘದ ಸಾಲ ಮತ್ತು ಸಾಕಾಣಿಕೆ ಸಾಲ ವಿತರಣಾ ಸಮಾರಂಭದಲ್ಲಿ ಡಿ.ಕೆ. ಸುರೇಶ್ ಮಾತನಾಡಿದರು.

ಸರ್ಕಾರಗಳು ಸಾಲಮನ್ನಾ ಮಾಡುತ್ತವೆ ಎಂದು ಜನರು ಬ್ಯಾಂಕ್ ನಲ್ಲಿ ಬೆಳೆ ಸಾಲ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಸಾಲಮನ್ನಾ ಮಾಡಲು ಸಾಧ್ಯವಾಗುವುದಿಲ್ಲ. ಸಾಲಮನ್ನಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಐದು ಗ್ಯಾರಂಟಿಗಳನ್ನು ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಎಲ್ಲಾ ಕಡೆ ಸಾಲ ಮಾಡಿ ಕೇವಲ ಬಡ್ಡಿ ಕಟ್ಟುವುದಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ. ಸಾಲವನ್ನು ಪಡೆದು ಉತ್ತಮ‌ ಕೆಲಸಗಳಿಗೆ ಬಳಸಿಕೊಳ್ಳಿ. ಬಿಡಿಸಿಸಿ ಬ್ಯಾಂಕ್ ಅಲ್ಲಿ ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ 10 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.‌ ನೀವು ಉಳಿಯಬೇಕು ಜೊತೆಗೆ ಬ್ಯಾಂಕ್ ಸಹ ಉಳಿಯಬೇಕು ಎಂದು ಹೇಳಿದರು.

“1.10 ಲಕ್ಷ ಜನರಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ಅದರಲ್ಲಿ ನಮ್ಮ ಕ್ಷೇತ್ರದ ಜನರೇ 15,304 ಜನರಿದ್ದಾರೆ. ಇವರಿಗೆ 300 ಕೋಟಿಯಷ್ಟು ಬೆಳೆ ಹಾಗೂ ಜಾನುವಾರು ಸಾಲ ನೀಡಲಾಗಿದೆ. ಯಾರ ಬಳಿಯೂ ಕೈಯೊಡ್ಡಿ ಬದುಕಬೇಡಿ ಎಂದು ನಾವು ನಿಮಗೆ ಆಸರೆಯಾಗಿ ನಿಲ್ಲುತ್ತಿದ್ದೇವೆ. ಬೆಂಗಳೂರಿನಲ್ಲಿ ಮನೆಗೆಲಸಕ್ಕೆ ಹೋಗುವ ಬದಲು ತಾಯಂದಿರು ಎರಡು ಹಸು ಕಟ್ಟಿಕೊಂಡರೆ ಬದುಕು ಬಂಗಾರವಾಗುತ್ತದೆ. ಕನಕಪುರದಿಂದ ಎರಡುವರೆ ಲಕ್ಷ ಲೀಟರ್ ಹಾಲು ಬರುತ್ತಿದೆ. ಇದನ್ನು 4 ಲಕ್ಷ ಲೀಟರ್ ಗೆ ಏರಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

“ರೈತರು ಭವಿಷ್ಯದ ಚಿಂತನೆ ಮಾಡುತ್ತಿಲ್ಲ. ಕೇವಲ ನಗರದ ಬದುಕಿನ ಮೊರೆ ಹೋಗುತ್ತಿದ್ದೀರಿ. ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಆದರೆ ಬದುಕಿನ ದಾರಿಯನ್ನು ತೋರಿಸಬಹುದು. ರೇಷ್ಮೆಗೆ ಬೆಲೆ ಇಲ್ಲ ಎಂದರು.‌ ನಾನು ಕಾರ್ಖಾನೆ ಮಾಡಿದ ನಂತರ ಬೆಲೆ ಹೆಚ್ಚಾಗಿದೆ. ಅನೇಕರಿಗೆ ನಾನು ಕಾರ್ಖಾನೆ ಮಾಡಿ ಎಂದು ಹೇಳಿದೆ ಕೇಳಲಿಲ್ಲ.‌ ಕೊನೆಗೆ ನಾನೇ ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಸ್ಥಾಪನೆ ಮಾಡಿದೆ.‌ ಇಂದು ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಇದೆ” ಎಂದರು.

ಕ್ಷೇತ್ರದಲ್ಲಿ ಸುಮಾರು 12 ಸಾವಿರ ಜನರಿಗೆ ಕೃಷಿ ಭೂಮಿ ಹಂಚಿಕೆ ಮಾಡಲಾಗಿದೆ. ನಾನೇ 1 ಸಾವಿರ ಜನರಿಗೆ ಭೂಮಿ ಹಂಚಿಕೆ ಮಾಡಿದ್ದೇನೆ. ಇನ್ನೂ 500- 600 ಜನರಿಗೆ ಭೂಮಿಯನ್ನು ಹಂಚಲು ಬಾಕಿಯಿದೆ. ಅದಕ್ಕೆ ಜಾಗ ಹುಡುಕಲಾಗುತ್ತಿದೆ. 30-40 ಲಕ್ಷ‌ ಮೌಲ್ಯದ ಜಮೀನನ್ನು ಒಂದೇ ಒಂದು ರೂಪಾಯಿ ಪಡೆಯದೇ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಯಾರೂ ಕೇಳದೇ ಇದ್ದರೂ ಶೂನ್ಯ ಬಡ್ಡಿ ದರದಲ್ಲಿ ನಾವೇ ಮನೆ ಬಾಗಿಲಿಗೆ ಬಂದು ಬೆಳೆ, ಜಾನುವಾರ‌‌ ಸಾಲ ನೀಡುತ್ತಿದ್ದೇವೆ. ಹಾಲಿನ ಖರೀದಿ ದರ ಹೆಚ್ಚಳ ಮಾಡಿ ನಿಮ್ಮ ಪರವಾಗಿ ನಿಂತಿದ್ದೇವೆ. 5 ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ. ನಿಮ್ಮ ಏಳಿಗೆಯೇ ನಮ್ಮ ಏಳಿಗೆ ಎಂದು ಕೆಲಸ ಮಾಡುತ್ತಿದ್ದೇವೆ. ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ನೀವುಗಳು ಶ್ರಮಿಸಬೇಕು” ಎಂದರು.

“ಬೆಂಗಳೂರು ದಕ್ಷಿಣ ಜಿಲ್ಲೆಯಾದ ತಕ್ಷಣ ಏಕೆ ಜಮೀನುಗಳ ಬೆಲೆ ಹತ್ತಿರತ್ತಿರ ಒಂದು ಕೋಟಿ ತಲುಪಿದೆ.‌ ಏಕೆ ಶ್ರೀಮಂತರು ಕೃಷಿ ಭೂಮಿ ಕೊಂಡುಕೊಳ್ಳುತ್ತಿದ್ದಾರೆ. ಶಿವಕುಮಾರ್ ಅವರು 25 ವರ್ಷಗಳಿಂದ ಜಮೀನು ಮಾರಬೇಡಿ ಎಂದು ಹೇಳುತ್ತಲೇ ಇದ್ದರು ಜನರು ಜಮೀನು ಮಾರುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ರಾಜಕೀಯವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ ಎಂದರೂ ಕೇಳದೆ ಬಮುಲ್ ಅಧ್ಯಕ್ಷನನ್ನಾಗಿ ಎಲ್ಲಾ ಮುಖಂಡರು ಸೇರಿ ಆಯ್ಕೆ ಮಾಡಿದ್ದೀರಿ. ನಾನು ಹೇಳು ಸಂಗತಿಗಳನ್ನು ಸಹ ನೀವುಗಳು ಕೇಳಬೇಕಾಗುತ್ತದೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *