“ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಅನುದಾನ, ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಅನುಮತಿ ಸೇರಿದಂತೆ ಕರ್ನಾಟಕದ ಪರವಾಗಿ ಬಿಜೆಪಿ ಸಂಸದರು ಬಾಯಿ ಬಿಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ ಮರು ಚುನಾವಣೆ ಎದುರಿಸಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು.
ಲಕ್ಕವಳ್ಳಿಯ ಭದ್ರಾ ಅಣೆಕಟ್ಟು ಬಾಗಿನ ಅರ್ಪಣೆ ಬಳಿಕ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು. “ಬಿಜೆಪಿ ಸಂಸದರು ಒಂದೇ ಒಂದು ದಿನವೂ ಪ್ರಧಾನಿಯವರನ್ನು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿಲ್ಲ. ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರು ನಾವು ಮಾತನಾಡಿದ್ದೇವೆ ಎಂದು ಹೇಳಿದರು ಬಿಟ್ಟರೆ, ಮಿಕ್ಕವರದ್ದು ಬರೀ ಬುಟ್ಟಿ ಬೇವಿನ ಸೊಪ್ಪು” ಎಂದು ವ್ಯಂಗ್ಯವಾಡಿದರು.
“ನಾವು ನಿಮ್ಮ ಬಳಿ ಬೇಡುತ್ತಿಲ್ಲ, ಕೊಡಿ ಎಂದು ಕೊರಗುತ್ತಿಲ್ಲ. ನಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ” ಎಂದು ಹೇಳಿದರು. ಬಿಜೆಪಿ ಸಂಸದರು ಎದುರುಗೊಂಡರೆ ಜನರು ಪ್ರಶ್ನೆ ಮಾಡಬೇಕು. ನಮ್ಮ ಪಾಲಿನ ಹಣ ಕೊಡಿಸಿ ಎಂದು ಕೇಳಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೇಳಲು ರಾಜ್ಯದ ಬಿಜೆಪಿ ಸಂಸದರು ಬಾಯನ್ನೇ ಬಿಚ್ಚುತ್ತಿಲ್ಲ. ನಾನು ಎರಡು ಬಾರಿ ಪ್ರಧಾನಿಯವರು ಹಾಗೂ ಹಣಕಾಸು ಸಚಿವರನ್ನು ಭೇಟಿಯಾಗಿದ್ದೇನೆ. ಕೇಂದ್ರ ಜಲಶಕ್ತಿ ಸಚಿವರಲ್ಲಿಯೂ ಮನವಿ ಮಾಡಿದ್ದೇನೆ. ಆದರೆ ಬಿಜೆಪಿಯವರು ಬಾಯಿಯನ್ನೇ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇವೇಂದ್ರ ಫಡ್ನವಿಸ್ ಅವರೇ ಆಲಮಟ್ಟಿ ಎತ್ತರ ಹೆಚ್ಚಳ ನಿಮ್ಮ ಹಕ್ಕಲ್ಲ, ನಮ್ಮ ಹಕ್ಕು. ಆಲಮಟ್ಟಿ ಎತ್ತರವನ್ನು 524 ಮೀಟರ್ ಗೆ ಎತ್ತರಿಸಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿರುವುದು ಸರಿಯಲ್ಲ ಎಂದರು.
“ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ನಮ್ಮ ಸರ್ಕಾರ 11 ಸಾವಿರ ಕೋಟಿಯಷ್ಟು ಹಣವನ್ನು ಖರ್ಚು ಮಾಡಿದೆ. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಅಲ್ಲಿ ರೂ.5,300 ಕೋಟಿ ನೀಡುತ್ತೇವೆ ಎಂದು ಹೇಳಿದ್ದರು. ಇದನ್ನು ನೋಡಿ ಬಸವರಾಜ ಬೊಮ್ಮಾಯಿ ಅವರು 5,300 ಕೋಟಿ ಬರುತ್ತದೆ. ಅದಕ್ಕೆ ಒಂದಷ್ಟು ಕೆಲಸಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು” ಎಂದು ತಿಳಿಸಿದರು.
“ಐದು ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಭದ್ರಾ ಅಣೆಕಟ್ಟು ತುಂಬಿದರೆ ರೈತರ ಜೀವನ ಸುಭದ್ರ. ನಾವು ನಮ್ಮಲ್ಲಿಯೇ ನೀರಿಗಾಗಿ ಜಗಳ ಮಾಡಿಕೊಳ್ಳಬಾರದು. ಆ ಜಿಲ್ಲೆ, ಈ ಜಿಲ್ಲೆ, ನೀರು ಈ ತಾಲ್ಲೂಕಿಗೆ ಸೇರಬೇಕು ಎಂದು ಜಗಳ ಮಾಡಿಕೊಂಡರೆ ಪ್ರಯೋಜನವಿಲ್ಲ. ನಾವು ಎಲ್ಲರಿಗೂ ನ್ಯಾಯ ಸಲ್ಲಿಸುವ ಕೆಲಸ ಮಾಡುತ್ತೇವೆ. ಆಲಮಟ್ಟಿ ಎತ್ತರವನ್ನು 524 ಮೀ. ಎತ್ತರಿಸಲು ಕೇಂದ್ರದಿಂದ ಅನುಮತಿ ನೀಡುತ್ತಲೇ ಇಲ್ಲ. ಬಿಜೆಪಿಯವರು ತುಟಿ ಬಿಚ್ಚುತ್ತಿಲ್ಲ” ಎಂದರು.
“ಚೆನ್ನಗಿರಿ ತಾಲ್ಲೂಕಿನಲ್ಲಿ 45 ಕೆರೆಗಳನ್ನು ತುಂಬಿಸಲು ರೂ.365 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಭದ್ರಾ ಅಚ್ಚುಕಟ್ಟಿನ ಶಾಸಕರ ಕ್ಷೇತ್ರದ ಅನೇಕ ಕೆಲಸಗಳಿಗೆ ನಾನು ಮಂಜೂರಾತಿ ನೀಡಿದ್ದೇನೆ. ಏಕೆಂದರೆ ಚುನಾವಣೆ ಹೊತ್ತಿಗೆ ಜನರು ಏನು ಕೆಲಸ ಮಾಡಿದ್ದಾರೆ ಎಂದು ನೋಡುತ್ತಾರೆ ಹೊರತು ಇನ್ನೇನನ್ನೂ ನೋಡುವುದಿಲ್ಲ” ಎಂದು ಹೇಳಿದರು.
ರೂ.100 ಕೋಟಿ ಪ್ರಸ್ತಾವನೆ
“ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಭದ್ರಾ ಅಣೆಕಟ್ಟುವಿನ ನಾಲೆಗಳು ದುರಸ್ತಿಯಾಗಬೇಕು ಎಂದು ಸುಮಾರು ರೂ.100 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಗಮೇಶ್ ಅವರು ಸುಮಾರು ರೂ.150 ಕೋಟಿ ವಿಶೇಷ ಅನುದಾನವನ್ನು ನನ್ನನ್ನು ಪುಸಲಾಯಿಸಿ ಜನರ ಕಲ್ಯಾಣಕ್ಕೆ ಪಡೆದುಕೊಂಡು ಬಿಟ್ಟಿದ್ದಾರೆ. ಮಧು ಬಂಗಾರಪ್ಪ ಅವರಿಗೆ, ಸಾಗರದ ಬೇಳೂರು ಗೋಪಾಲಕೃಷ್ಣ ಅವರಿಗೂ ವಿಶೇಷ ಅನುದಾನಗಳನ್ನು ನೀಡಿದ್ದೇನೆ. ಪರಿಷತ್ ಸದಸ್ಯರಾದ ಬಲ್ಕಿಸ್ ಬಾನು ಅವರು ಭದ್ರಾವತಿ ಹಾಗೂ ಶಿವಮೊಗ್ಗದ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡು ಅನುದಾನಗಳನ್ನು ಪಡೆಯುತ್ತಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ ಅವರು ಸಹ ವಿಶೇಷ ಕಾಳಜಿವಹಿಸಿ ಭದ್ರಾ ಅಚ್ಚುಕಟ್ಟು ಪ್ರದೇಶಗಳ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
“ದೊಡ್ಡ ಇತಿಹಾಸ ಹೊಂದಿರುವ ಅಣೆಕಟ್ಟು ಇದಾಗಿದ್ದು, 1947 ರಲ್ಲಿ ಕಟ್ಟಲು ಪ್ರಾರಂಭ ಮಾಡಲಾಯಿತು. 1965 ರಲ್ಲಿ ಕಾರ್ಯಚಾರಣೆ ಪ್ರಾರಂಭ ಮಾಡಿತು. ಇದರ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅವರ ಕೊಡುಗೆಯೂ ಇದೆ. ಇಷ್ಟು ವರ್ಷದ ಇತಿಹಾಸದಲ್ಲಿ ಜುಲೈ ತಿಂಗಳಲ್ಲಿ ತುಂಬಿರುವುದು ಮೂರು ಬಾರಿ ಮಾತ್ರ. ಈ ವರ್ಷ ಗರಿಷ್ಠ ಮಟ್ಟ ತಲುಪಿ ಇತಿಹಾಸ ನಿರ್ಮಾಣ ಮಾಡಿದೆ” ಎಂದು ಹೇಳಿದರು.
“ಗ್ಯಾರಂಟಿಗಳಿಗೆ ಎಂದು 52 ಸಾವಿರ ಕೋಟಿ ಹಣವನ್ನು ವಾರ್ಷಿಕವಾಗಿ ಜನರಿಗಾಗಿ ಖರ್ಚು ಮಾಡುತ್ತಿದ್ದೇವೆ. ಈಗಾಗಲೇ 1 ಲಕ್ಷ ಕೋಟಿಯಷ್ಟು ಹಣ ಯಾವ ಮಧ್ಯವರ್ತಿಯೂ ಇಲ್ಲದೇ ಜನರಿಗೆ ತಲುಪಿದೆ. ಈ ರೀತಿಯ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ, ದಳದವರು ನೀಡಿಲ್ಲ. ಬಿಜೆಪಿಯವರು ನಮ್ಮನ್ನು ನಕಲು ಮಾಡಿದರು ಆದರೆ ಇನ್ನೂ ಸರಿಯಾಗಿ ಜಾರಿ ಮಾಡಲು ಸಾಧ್ಯವಾಗಿಲ್ಲ. 2028 ಕ್ಕೆ ಅಧಿಕಾರಕ್ಕೆ ಬರುವುದು ನಿಶ್ಚಿತ” ಎಂದರು.