ನೇಪಾಳದಲ್ಲಿ ಕೆ.ಪಿ. ಒಲಿ ಶರ್ಮಾ ಸರ್ಕಾರ ಪತನಗೊಂಡ ಬಳಿಕ ಶಾಂತವಾಗಿದ್ದ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಹಿಂಸಾಚಾರ ಮತ್ತೆ ತಾರಕಕ್ಕೇರಿದ್ದು, ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ರಾಜೇಶಾ ಗೋಲಾ ಎಂಬ ಮಹಿಳೆ ಪತಿಯ ಜೊತೆ ನೇಪಾಳ ಪ್ರವಾಸಕ್ಕೆ ಹೋಗಿದ್ದರು. ಕಠ್ಮಂಡುವಿನ ಹಯಾತ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಗಲಭೆಗಳು ತಗ್ಗಿದ್ದರೂ ಸಾರಿಗೆ ಸೌಕರ್ಯ ಇಲ್ಲದಿದ್ದರಿಂದ ಹೋಟೆಲ್‌ನಲ್ಲಿಯೇ ಉಳಿಯುವಂತಾಗಿತ್ತು.
ಮತ್ತೆ ಪ್ರತಿಭಟನೆ ಆರಂಭಗೊಂಡು ಹಿಂಸಾಚಾರ ಭುಗಿಲೆದ್ದು ಪ್ರತಿಭಟನಾಕಾರರು ಕಠ್ಮಂಡುವಿನ ಅನೇಕ ಕಟ್ಟಡಗಳಿಗೆ ಬೆಂಕಿ ಹಾಕಿದರು. ರಾಜೇಶಾ ಗೋಲಾ ದಂಪತಿ ಇದ್ದ ಹಯಾತ್ ಲಾಡ್ಜ್ ಗೂ ಬೆಂಕಿಯಿಟ್ಟರು. ಹೋಟೆಲ್ ಹೊತ್ತಿ ಉರಿಯುವಾಗ ರಾಜೇಶಾ ಕೊಠಡಿಯಿಂದ ಕೆಳಕ್ಕೆ ಜಿಗಿದಿದ್ದರು.
ಕೆಳಕ್ಕೆ ಬಿದ್ದಾಗ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಕಠ್ಮಂಡುವಿನ ತ್ರಿಭುವನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ತ್ರಿಭುವನ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ರಾಜೇಶಾ ಗೋಲಾ ಅವರ ಪಾರ್ಥಿವ ಶರೀರವನ್ನು ಅವರ ಪತಿ ರಾಮ್ ವೀರ್ ಸಿಂಗ್ ಗೋಲಾ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಆಸ್ಪತ್ರೆ ತಿಳಿಸಿದೆ.
ರಾಮಜನ್ಮಭೂಮಿ ಬಗ್ಗೆ ನಾನು ಆಕ್ಷೇಪಾರ್ಹ ಹೇಳಿಕೆ ನೀಡದೆ ಇದ್ದಿದ್ದರೆ ನಾನು ಅಧಿಕಾರದಲ್ಲಿ ಮುಂದುವರಿಯುತ್ತಿದ್ದೆ ಎಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಶರ್ಮಾ ಹೇಳಿದ್ದಾರೆ.
2020ರ ಜುಲೈನಲ್ಲಿ ಹೇಳಿಕೆ ನೀಡಿದ್ದ ಅವರು, ಶ್ರೀರಾಮನ ನಿಜವಾದ ಜನ್ಮಭೂಮಿ ದಕ್ಷಿಣ ನೇಪಾಳದಲ್ಲಿದೆ. ಅಲ್ಲಿರುವ ಬೀರ್ ಗುಂಜ್ ನಲ್ಲಿರುವ ಥೋರಿ ಎಂಬ ನದಿ ತೀರದಲ್ಲಿರುವ ಪ್ರಾಂತ್ಯದಲ್ಲೇ ಶ್ರೀರಾಮ ಹುಟ್ಟಿದ್ದು. ಆದರೆ ಭಾರತೀಯರು ಶ್ರೀರಾಮ ಹುಟ್ಟಿದ್ದು ಅಯೋಧ್ಯೆ ಎಂದು ಹೇಳುತ್ತಾರೆ. ಭಾರತದ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯು ಶ್ರೀರಾಮನ ನಕಲಿ ಜನ್ಮಭೂಮಿ, ದಕ್ಷಿಣ ನೇಪಾಳದಲ್ಲಿರುವುದೇ ಅಸಲಿ ಜನ್ಮಭೂಮಿ ಎಂದು ಹೇಳಿದ್ದರು. ಇದನ್ನು ಭಾರತ ಹಾಗೂ ನೇಪಾಳದ ಪ್ರತಿಪಕ್ಷಗಳು ಖಂಡಿಸಿದ್ದವು.