ರಷ್ಯಾದೊಳಗೆ ತನ್ನ ಲಾರಿಗಳನ್ನು ರಹಸ್ಯವಾಗಿ ಸಾಗಿಸಿ ಬಳಿಕ ಅದರೊಳಗಿಂದ ಡ್ರೋನ್ ಹಾರಿಸಿ ರಷ್ಯಾದ 40 ಯುದ್ಧ ವಿಮಾನ ಧ್ವಂಸಗೊಳಿಸಿದ್ದ ಉಕ್ರೇನ್, ಎರಡು ದಿನ ಕಳೆದ ಕೂಡಲೇ ನೆಲದಾಳದಿಂದಲೇ ದಾಳಿ ನಡೆಸಿ ರಷ್ಯಾದ ಕ್ರೆಮ್ಲಿನ್ ಸೇತುವೆಯನ್ನು ಸ್ಫೋಟಿಸಿದೆ.
ಅಂದಾಜು 11000 ಕೆಜಿ ಸ್ಫೋಟಕಗಳನ್ನು ಬಳಸಿ ಸೇತುವೆಯನ್ನು ನಾಶಪಡಿಸಲಾಗಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಳ್ಳಲಾದ ಕ್ರೈಮಿಯಾ ದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಈ ಕಂಬಗಳಿಗೆ ಸ್ಫೋಟದಿಂದ ಭಾರೀ ಹಾನಿಯಾಗಿ ಸೇತುವೆ ಕುಸಿದು ಬಿದ್ದಿದೆ. ಕೆರ್ಚ್ ಜಲಸಂಧಿಯಿಂದ ಕ್ರಮಿಸುವ ಸೇತುವೆಯು, ಸೇನೆ ಮತ್ತು ನಾಗರಿಕೆ ಓಡಾಟಕ್ಕೆ ಅತ್ಯಗತ್ಯ. ಉಕ್ರೇನ್‌ನ ಭದ್ರತಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ದಾಳಿ ನಡೆಸಲು ಹಲವು ತಿಂಗಳುಗಳಿಂದ ಯೋಜನೆ ರೂಪಿಸಲಾಗುತ್ತಿತ್ತು ಎಂದು ಹೇಳಿ ಸ್ಫೋಟದ ವೀಡಿಯೊ ಬಿಡುಗಡೆ ಮಾಡಿದೆ.
ಕೆಲವು ದಿನಗಳ ಹಿಂದೆ ನಡೆದ ದಾಳಿಗೆ ರಷ್ಯಾದ 2 ಸೇತುವೆಗಳು ಕುಸಿದು, ರೈಲುಗಳು ಕೆಳಗುರುಳಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಯನ್ನು ಉಕ್ರೇನ್ ನಡೆಸಿದ್ದು ಎಂದು ರಷ್ಯಾ ಹೇಳಿತ್ತು.
ಈ ಹಿಂದೆ ವಾಷಿಂಗ್ಟನ್‌ನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಅವಮಾನಿಸಿ, ನಿಮ್ಮ ಹತ್ತಿರ ಕಾರ್ಡ್‌ಗಳು ಇಲ್ಲ. ನನ್ನ ಹತ್ತಿರ ಇವೆ. ನಾನು ಹೇಳಿದಂತೆ ಆಟ ನಡೆಯುತ್ತದೆ ಎಂದಿದ್ದರು. ಈ ಕಾರಣಕ್ಕೆ ಪುಟಿನ್‌ಗೆ ಮಾತ್ರವಲ್ಲ ಟ್ರಂಪ್‌ಗೂ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಜೆಲೆನ್ಸ್ಕಿ 117 ಡ್ರೋನ್ ಬಳಸಿ ರಷ್ಯಾದ 5 ವಾಯುನೆಲೆಗಳ 40 ಸಮರ ವಿಮಾನ ಧ್ವಂಸಗೊಳಿಸಿದರು ಎಂದು ವರದಿಗಳು ಹೇಳುತ್ತಿವೆ.